ಕರ್ನಾಟಕ

‘ಕಿಸ್ ಆಫ್ ಲವ್‌’ ಆಂದೋಲನಕ್ಕೆ ಆರಂಭದಲ್ಲಿಯೇ ಹಿನ್ನಡೆ; ಹೋರಾಟದಿಂದ ಹಿಂದೆ ಸರಿದ ಸಂಘಟನೆಯ ಸದಸ್ಯೆ ರಚಿತಾ ತನೇಜಾ

Pinterest LinkedIn Tumblr

kiss

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಲು ಉದ್ದೇಶಿಸಿದ್ದ ‘ಕಿಸ್ ಆಫ್ ಲವ್‌’ ಆಂದೋಲನಕ್ಕೆ ಆರಂಭದಲ್ಲಿಯೇ ಹಿನ್ನಡೆಯಾಗಿದ್ದು, ಸಂಘಟನೆಯ ಸದಸ್ಯೆ ರಚಿತಾ ತನೇಜಾ ಅವರು ಹೋರಾಟದಿಂದ ಹಿಂದೆ ಸರಿದಿದ್ದಾರೆ.

ರಚಿತಾ ತನೇಜಾ ಅವರು ಕಿಸ್ ಆಫ್ ಲವ್ ಆಂದೋಲನದ ಮುಂಚೂಣಿ ತಂಡದಲ್ಲಿ ಗುರುತಿಸಿಕೊಂಡಿದ್ದು, ಇದೀಗ ಅವರೇ ಆಂದೋಲನದಿಂದ ಹಿಂದೆ ಸರಿದಿರುವುದರಿಂದ ಆಚರಣೆಯೇ ಅನುಮಾನವಾಗಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಚಿತಾ ತನೇಜಾ ಅವರು, ತಾವು ‘ಕಿಸ್ ಆಫ್ ಲವ್‌’ನ ಆಯೋಜಕಿಯಲ್ಲ. ನಾನು ಆಂದೋಲನದ ಓರ್ವ ಸದಸ್ಯೆಯಷ್ಟೇ. ನಾನು ಕೂಡ ಆಂದೋಲನ ನಡೆಸುವ ತಂಡದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದೆ. ಆದರೆ ನನ್ನ ವೈಯುಕ್ತಿಕ ಕಾರಣಗಳಿಂದಾಗಿ ಆಂದೋಲನದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ತಾವು ಹಿಂದೆ ಸರಿದ ಮಾತ್ರಕ್ಕೆ ಕಿಸ್ ಡೇ ನಿಲ್ಲುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಿ ಕೇರಳದಲ್ಲಿ ನಡೆಸಲಾಗಿದ್ದ ಕಿಸ್ ಆಫ್ ಲವ್ ಆಂದೋಲನವನ್ನು ಬೆಂಗಳೂರಿನಲ್ಲಿಯೂ ನಡೆಸಲು ಕೆಲ ಸಂಘಟನೆಗಳು ನಿರ್ಧರಿಸಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸಾಕಷ್ಟು ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಸ್ವತಃ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನು ಬಾಹಿರ ಚಟುವಟಿಕೆ ನಡೆಸಿದರೆ ಖಂಡಿತವಾಗಿಯೂ ಕ್ರಮ ಕೈಗೊಳ್ಳುವುದಾಗಿ ಪರೋಕ್ಷ ಎಚ್ಚರಿಕೆ ನೀಡಿದ್ದರು. ಮಾಧ್ಯಮಗಳಲ್ಲಿಯೂ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು.

Write A Comment