ಕನ್ನಡ ವಾರ್ತೆಗಳು

ಸಲಿಂಗಕಾಮದ ವಿರುದ್ದ ಕಾನೂನು ಪರೀಶೀಲನೆಗೆ ಎಲ್.ಜಿ.ಬಿಟಿ ಕಾರ್ಯಕ್ರತರಿಂದ ಪ್ರತಿಭಟನೆ.

Pinterest LinkedIn Tumblr

Homosexuality_Legal_India

ಬೆಂಗಳೂರು, ನ. 24: ಸಲಿಂಗಕಾಮದ ವಿರುದ್ಧ ಜಾರಿಯಾಗಿರುವ ಕಾನೂನುಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಒತ್ತಾಯಿಸಿ ಸುಮಾರು 2 ಸಾವಿರಕ್ಕೂ ಅಧಿಕ ಜನ ಬೆಂಗಳೂರಿನಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು. ನಗರದ ರೈಲ್ವೆ ನಿಲ್ದಾಣದ ಎದುರಿಗೆ ಸೇರಿದ ಎಲ್ ಜಿ ಬಿಟಿ ಸಮುದಾಯದ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಬೆಂಗಳೂರು ಪ್ರೈಡ್ ಕ್ವೀರ್ ಹಬ್ಬ ಹೆಸರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡವರು ವಿವಿಧ ಘೋಷಣೆ ಕೂಗಿದರು.

ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಸಲಿಂಗಕಾಮದ ಪರ ಘೋಷಣೆ ಕೂಗಿದರು. ಡ್ರಮ್ಸ್ ಬಾರಿಸುವ ಮೂಲಕ ಹಾಡು ಹಾಡಿ ನರ್ತಿಸಿದರು. ಜನರನ್ನು ಬಂಧನದಲ್ಲಿಡಬೇಡಿ, ಪ್ರೀತಿಸುವುದು ನಮ್ಮ ಹಕ್ಕು, ಮೂಲಭೂತ ಹಕ್ಕಿಗೆ ಚ್ಯುತಿ ತರಬಾರದು ಎಂದು ಹೇಳಿದರು. ಭಾರತೀಯ ದಂಡ ಸಂಹಿತೆಯ 377 ನೇ ವಿಧಿಯನ್ನು ಇನ್ನೊಮ್ಮೆ ಪರಿಶೀಲಿಸಬೇಕು. ಸಲಿಂಗಕಾಮವನ್ನು ಅಪರಾಧ ಎಂದು ಕರೆಯುವ ಪರಿಪಾಠ ಬದಲಾಗಬೇಕು. ಕರ್ನಾಟಕ ಪೊಲೀಸ್ ಇಲಾಖೆಯ 36(ಎ) ಗೂ ಬದಲಾವಣೆ ತರಬೇಕು ಎಂದು ಆಗ್ರಹಿಸಿದರು.  ಸಲಿಂಗಕಾಮಿಗಳು ಪೊಲೀಸರಿಂದ ಪ್ರತಿದಿನ ಹಿಂಸೆ ಅನುಭವಿಸುತ್ತಿದ್ದಾರೆ.

ಮನನೊಂದ ಕೆಲ ಸಲಿಂಗಕಾಮಿಗಳು ಆತ್ಮಹತ್ಯೆ ಮಾಡಿಕೊಂಡ ದಾಖಲೆಯೂ ಇದೆ. ಸಮಾಜದ ದೃಷ್ಟಿಯಲ್ಲಿ ಇವರನ್ನು ಕೆಟ್ಟದಾಗಿ ನೋಡಲಾಗುತ್ತಿದೆ ಎಂದು ದೂರಿದರು. ಮದುವೆಯ ನಂತರ ವಿರುದ್ಧ ಲಿಂಗಿಗಳು ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ. ಲಿಂಗ ಪರಿವರ್ತನೆ ಹೊಂದಿದವರು ಪೊಲೀಸರಿಂದಲೇ ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ. ಒಂದೇ ಲಿಂಗದ ವ್ಯಕ್ತಿಗಳು ಅನೇಕ ವರ್ಷ ಕಾಲ ಒಂದೇ ಮನೆಯಲ್ಲಿ ವಾಸಿಸಲು ಅವಕಾಶವಿದೆ. ಆದರೆ ಜಂಟಿಯಾಗಿ ಮನೆ ಕೊಳ್ಳುವಂತಿಲ್ಲ ಅಥವಾ ಬ್ಯಾಂಕ್ ಖಾತೆ ತೆರೆಯುವಂತಿಲ್ಲ. ಕಾನೂನಿನಲ್ಲಿ ಇಷ್ಟೆಲ್ಲಾ ವಿರೋಧಾಭಾಸಗಳಿವೆ ಎಂದು ಹೇಳಿದರು

ಕಳೆದ ಡಿಸೆಂಬರ್ ನಲ್ಲಿ ಸಲಿಂಗಕಾಮದ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ‘ನಿಸರ್ಗಕ್ಕೆ ವಿರೋಧವಾದ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧ, ಇದಕ್ಕೆ 10 ವರ್ಷದ ಕಠಿಣ ಶಿಕ್ಷೆ ವಿಧಿಸಬಹುದು’ ಎಂದು ಹೇಳಿತ್ತು. ಅಲ್ಲಿಂದ ನಿರಂತರವಾಗಿ ಮೇಲ್ಮನವಿ ಸಲ್ಲಿಕೆ ಮತ್ತು ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಲೇ ಇವೆ.

Write A Comment