ಕರ್ನಾಟಕ

506 ಕೋಟಿ ರೂ. ಮೌಲ್ಯದ ಸರಕಾರಿ ಜಮೀನು ವಶ: ದೇವಾಲಯ ಧ್ವಂಸದ ವದಂತಿ, ಒತ್ತುವರಿ ತೆರವು ಕೈಬಿಡುವಂತೆ ಪ್ರತಿಭಟನೆ, ಜಿಲ್ಲಾಧಿಕಾರಿಯಿಂದ ಮನವೊಲಿಕೆ

Pinterest LinkedIn Tumblr

1jcp

FILE  PICS

ಬೆಂಗಳೂರು: ಸರಕಾರಿ ಜಮೀನು ಒತ್ತುವರಿದಾರರಿಗೆ ಬಿಸಿ ಮುಟ್ಟಿಸುತ್ತಿರುವ ಜಿಲ್ಲಾಡಳಿತವು ಶನಿವಾರ ಭಾರಿ ಪ್ರಮಾಣದ ತೆರವು ಕಾರ್ಯಾಚರಣೆ ನಡೆಸಿ, 506 ಕೋಟಿ ರೂ. ಮೌಲ್ಯದ 106 ಎಕರೆ ಸರಕಾರಿ ಭೂಮಿ ವಶಪಡಿಸಿಕೊಂಡಿದೆ.

ನಗರ ಜಿಲ್ಲಾಧಿಕಾರಿ ವಿ ಶಂಕರ್ ಮಾರ್ಗದರ್ಶನದಲ್ಲಿ ಬೆಂಗಳೂರು ಪೂರ್ವ, ಉತ್ತರ, ಉತ್ತರ (ಹೆಚ್ಚುವರಿ), ದಕ್ಷಿಣ ಮತ್ತು ಆನೇಕಲ್ ತಾಲೂಕಿನಲ್ಲಿ ಏಕಕಾಲಕ್ಕೆ ನಡೆದ ಕಾರ್ಯಾಚರಣೆಯಲ್ಲಿ 106.01 ಎಕರೆ ಜಮೀನನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ಕಸಬಾ ಹೋಬಳಿಯ ಕಾಚರಕನಹಳ್ಳಿಯ ಸರ್ವೆ ನಂ.153ರಲ್ಲಿ ಒತ್ತುವರಿಯಾಗಿದ್ದ 33 ಎಕರೆ ಕೆರೆ ಜಾಗವನ್ನು ತೆರವುಗೊಳಿಸಲು ಮುಂದಾದಾಗ ಸ್ಥಳೀಯರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಪರಿಣಾಮವಾಗಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆರೆ ಜಾಗದಲ್ಲಿ ನಿರ್ಮಿಸಲಾಗಿದ್ದ ಐದು ದೇವಾಲಯಗಳನ್ನು ಒಡೆಯುತ್ತಿದ್ದಾರೆ ಎಂದು ಒತ್ತುವರಿದಾರರು ವದಂತಿ ಹರಡಿದ್ದರಿಂದ ಸಾವಿರಾರು ಭಕ್ತರು ದೇವಾಲಯದ ಬಳಿ ಜಮಾಯಿಸಿ, ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ದೇವಾಲಯದ ಹಿಂಭಾಗದಲ್ಲಿನ ಶೆಡ್‌ಗಳನ್ನು ಜೆಸಿಬಿ ಯಂತ್ರಗಳ ನೆರವಿನಿಂದ ತೆರವುಗೊಳಿಸಲು ಮುಂದಾದಾಗ ತೀವ್ರ ಪ್ರತಿಭಟನೆ ನಡೆಸಿದರು. ಸಂಸದ ಪಿ ಸಿ ಮೋಹನ್, ಪಾಲಿಕೆ ಸದಸ್ಯ ಪದ್ಮನಾಭ ರೆಡ್ಡಿ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಸ್ಥಳೀಯರು ಮತ್ತು ಭಕ್ತಾದಿಗಳು ಕೆಲಕಾಲ ಪ್ರತಿಭಟನೆ ನಡೆಸಿ, ಒತ್ತುವರಿ ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ವಿ ಶಂಕರ್, ”ದೇವಾಲಯಗಳನ್ನು ಯಾವುದೇ ಕಾರಣಕ್ಕೂ ಒಡೆಯುವುದಿಲ್ಲ. ಭಕ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಉದ್ದೇಶವಿಲ್ಲ. ಕಿಡಿಗೇಡಿಗಳು ಹಬ್ಬಿಸಿರುವ ವದಂತಿಗೆ ಯಾರೂ ಕಿವಿಗೊಡಬಾರದು. ದೇವಾಲಯ ಹೊರತುಪಡಿಸಿ, ಉಳಿದೆಡೆ ಅಕ್ರಮವಾಗಿ ನಿರ್ಮಿಸಲಾಗಿರುವ ಶೆಡ್‌ಗಳು, ವಾಣಿಜ್ಯ ಕಟ್ಟಡಗಳನ್ನಷ್ಟೆ ತೆರವು ಮಾಡಲಾಗುವುದು,” ಎಂದು ಪ್ರತಿಭಟನಾನಿರತರ ಮನವೊಲಿಸಿದರು. ಜತೆಗೆ, ”ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ಹಸ್ತಾಂತರಿಸಿ ಅಭಿವೃದ್ಧಿಪಡಿಸಲಾಗುವುದು,” ಎಂದು ಭರವಸೆ ನೀಡಿದರು. ಬಳಿಕ 33 ಎಕರೆ ಕೆರೆ ಜಾಗವನ್ನು ವಶಕ್ಕೆ ಪಡೆದುಕೊಳ್ಳಲಾಯಿತು.

ಕಾಚರಕನಹಳ್ಳಿ ಕೆರೆಯು 57 ಎಕರೆ ವಿಸ್ತೀರ್ಣ ಹೊಂದಿದ್ದು, ಈ ಪೈಕಿ 20 ಎಕರೆಯಲ್ಲಿ ಬಿಡಿಎ ಬಡಾವಣೆ ಅಭಿವೃದ್ಧಿಪಡಿಸಿ ನಿವೇಶನಗಳನ್ನು ಹಂಚಿಕೆ ಮಾಡಿದೆ. ಇಲ್ಲಿ ಶಿರಡಿ ಸಾಯಿಬಾಬಾ, ಕನ್ನಿಕಾ ಪರಮೇಶ್ವರಿ, ಉಗ್ರನರಸಿಂಹ, ಇಸ್ಕಾನ್ ಸಂಸ್ಥೆಯ ಶ್ರೀಕೃಷ್ಣ, ಕೋದಂಡರಾಮಸ್ವಾಮಿ ದೇವಾಲಯಗಳು ಸ್ಥಾಪನೆಯಾಗಿವೆ. ಅಲ್ಲದೆ ಗಣಪತಿ, ಅಯ್ಯಪ್ಪ, ಮಹಾಲಕ್ಷ್ಮಿ, ಆಂಜನೇಯ ಮತ್ತು ಈಶ್ವರ ಗುಡಿಗಳಿವೆ. ಒತ್ತುವರಿ ಪ್ರದೇಶದಲ್ಲಿ ಕಲ್ಯಾಣ ಮಂಟಪ, ಕ್ರೀಡಾಂಗಣ ಮತ್ತು ವಾಣಿಜ್ಯ ಕಟ್ಟಡಗಳು ತಲೆಯೆತ್ತಿವೆ. ಜಮೀನಿನ ಸರ್ವೆ ಕಾರ್ಯ ನಡೆಸಿ, ಕಟ್ಟಡಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತೆರವು ಮಾಡದಂತೆ ಒತ್ತಡ ಕಾಚರಕನಹಳ್ಳಿಯ ಕೆರೆ ಪ್ರದೇಶದ ಒತ್ತುವರಿ ತೆರವಿಗೆ ಗೃಹ ಸಚಿವ ಕೆ ಜೆ ಜಾರ್ಜ್ ಶುಕ್ರವಾರ ಸಂಜೆಯೇ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಅಲ್ಲದೆ ಪರಿಸ್ಥಿತಿಯನ್ನು ತುಂಬಾ ಜಾಗರೂಕತೆಯಿಂದ ನಿಭಾಯಿಸುವಂತೆಯೂ ನಿರ್ದೇಶನ ನೀಡಿದ್ದರು. ಅದರಂತೆ ಒತ್ತುವರಿ ತೆರವು ಕಾರ್ಯಕ್ಕೆ ಸಿದ್ಧತೆ ನಡೆಸಲಾಗಿತ್ತು.

ಆದರೆ ಮಧ್ಯರಾತ್ರಿ ಬಳಿಕ ತೆರವು ಕಾರ್ಯಾಚರಣೆ ಕೈಗೊಳ್ಳದಂತೆ ಭಾರಿ ಒತ್ತಡ ಶುರುವಾಗಿದೆ. ಬಿಎಂಟಿಎಫ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತೆರವು ಕಾರ್ಯ ಕೈಗೊಳ್ಳುವುದು ಬೇಡವೆಂದು ಜಿಲ್ಲಾಧಿಕಾರಿಗೆ ಮಧ್ಯರಾತ್ರಿ ಸಂದೇಶ ಕಳುಹಿಸಿದ್ದರು. ಗೃಹ ಸಚಿವರು ಮತ್ತು ನಗರ ಪೊಲೀಸ್ ಆಯುಕ್ತರು ತೆರವು ಕಾರ್ಯಾಚರಣೆ ಕೈಬಿಡುವಂತೆ ಸೂಚಿಸಿದ್ದಾರೆ ಎಂದೂ ಹೇಳಿದ್ದರು.

ವದಂತಿಗಳ ಎಸ್‌ಎಂಎಸ್ ಈ ಮಧ್ಯೆ ಕೆಲ ಕುತಂತ್ರಿಗಳು ದೇವಾಲಯಗಳನ್ನು ಧ್ವಂಸಗೊಳಿಸಲಾಗುತ್ತಿದೆ ಎಂಬ ವದಂತಿಯ ಸಂದೇಶವುಳ್ಳ 5-6 ಸಾವಿರ ಎಸ್‌ಎಂಎಸ್‌ಗಳನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಗೆ ಕಳುಹಿಸಿದ್ದಾರೆ. ತೆರವು ಕಾರ್ಯಾಚರಣೆ ನಡೆಸದಂತೆ ಜಿಲ್ಲಾಧಿಕಾರಿಗೂ ಎಚ್ಚರಿಕೆ ಸಂದೇಶ ಕಳುಸಹಿಸಲಾಗಿದೆ. ಆದರೆ ಬೆದರಿಕೆಗೆ ಜಗ್ಗದ ಜಿಲ್ಲಾಡಳಿತ, ತೆರವು ಕಾರ್ಯಾಚರಣೆ ಕೈಗೊಳ್ಳುವ ಮೂಲಕ ದಿಟ್ಟತನ ತೋರಿದೆ. ಸುಮಾರು 360 ಕೋಟಿ ರೂ. ಮೌಲ್ಯದ 33 ಎಕರೆಯನ್ನು ಸರಕಾರದ ವಶಕ್ಕೆ ಪಡೆದುಕೊಂಡಿದೆ.

ಕಗ್ಗಲೀಪುರ ಕೆರೆ ಒತ್ತುವರಿ ತೆರವು ಕನಕಪುರ ಮುಖ್ಯರಸ್ತೆಯ ಸಾಲುಹುಣಸೆ ಗ್ರಾಮದ ಸಮೀಪದಲ್ಲಿ 60 ಕೋಟಿ ರೂ. ಮೌಲ್ಯದ 45 ಎಕರೆ ಸರಕಾರಿ ಕೆರೆ ಪ್ರದೇಶದ ಒತ್ತುವರಿ ತೆರವುಗೊಳಿಸಲಾಗಿದೆ. ತಹಶೀಲ್ದಾರ್ ಬಿ ಆರ್ ದಯಾನಂದ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೆರೆ ಒತ್ತುವರಿ ತೆರವುಗೊಳಿಸಿ, ವಶಕ್ಕೆ ಪಡೆಯಲಾಗಿದೆ. ಸುಮಾರು 45 ಮಂದಿ ಒತ್ತುವರಿದಾರರು ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಅಲ್ಲದೆ 10 ಎಕರೆಯಷ್ಟು ಕೆರೆ ಏರಿಯನ್ನು ಒಡೆದು, ಖಾಸಗಿ ಬಡಾವಣೆಗೆ ರಸ್ತೆ ನಿರ್ಮಿಸಿಕೊಳ್ಳಲಾಗಿತ್ತು.

ಅಪಾರ್ಟ್‌ಮೆಂಟ್‌ಗಾಗಿ ಒತ್ತುವರಿ ಪ್ರೇಸ್ಟೀಜ್ ಗ್ರೂಪ್‌ನವರು ಬೃಹತ್ ಅಪಾರ್ಟ್‌ಮೆಂಟ್ ನಿರ್ಮಾಣಕ್ಕಾಗಿ ವೈಟ್‌ಫೀಲ್ಡ್‌ನಲ್ಲಿ 1.06 ಎಕರೆ ಸರಕಾರಿ ಗೋಮಾಳ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು. ತಹಸಿಲ್ದಾರ್ ಹರೀಶ್ ನಾಯಕ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಿ, ಜಮೀನನ್ನು ವಶಕ್ಕೆ ಪಡೆಯಲಾಗಿದೆ. ಇದಲ್ಲದೆ, ಹೂಡಿ ಗ್ರಾಮದಲ್ಲಿ ನಸ್ರುಫ್ ಎಂಬುವರು ಒತ್ತುವರಿ ಮಾಡಿಕೊಂಡಿದ್ದ 1.10 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಶೆಡ್‌ಗಳನ್ನು ತೆರವು ಮಾಡಲಾಗಿದೆ. ಪೂರ್ವ ತಾಲೂಕಿನಲ್ಲಿ ಒಟ್ಟು 30 ಕೋಟಿ ರೂ. ಮೌಲ್ಯದ 5.36 ಎಕರೆ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ಮರಳುಕುಂಟೆ, ಚಿಕ್ಕಜಾಲದಲ್ಲಿ ಸುಮಾರು 48.22 ಕೋಟಿ ರೂ. ಮೌಲ್ಯದ 14.29 ಎಕರೆಯನ್ನು ಸರಕಾರದ ಸುಪರ್ದಿಗೆ ಪಡೆಯಲಾಗಿದೆ. ಹಾಗೆಯೇ ಆನೇಕಲ್ ತಾಲೂಕಿನ ಬನ್ನೇರುಘಟ್ಟ, ಜಿಗಳ ಮತ್ತಿತರ ಪ್ರದೇಶದ 15 ಕೋಟಿ ರೂ. ಮೌಲ್ಯದ 7.16 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ಬನ್ನೇರುಘಟ್ಟದಲ್ಲಿ ಸಮೀವುಲ್ಲಾ ಎಂಬುವರು 1.32 ಎಕರೆ ಒತ್ತುವರಿ ಮಾಡಿಕೊಂಡು ಲೇಔಟ್ ನಿರ್ಮಿಸಿದ್ದರು. ಈ ಜಾಗದಲ್ಲಿ ಒಂದು ಮನೆ ನಿರ್ಮಿಸಿದ್ದು, 8 ನಿವೇಶನಗಳನ್ನು ಇತರರಿಗೆ ಮಾರಾಟ ಮಾಡಲಾಗಿತ್ತು.

Write A Comment