ಕರ್ನಾಟಕ

ಹುಡುಗಿಗಾಗಿ ಜಗಳ ಕೊಲೆಯಲ್ಲಿ ಅಂತ್ಯ

Pinterest LinkedIn Tumblr

chinnaraju

ಬೆಂಗಳೂರು: ಪ್ರೀತಿಸಿದ ಹುಡುಗಿಗಾಗಿ ಇಬ್ಬರು ಯುವಕರ ನಡುವೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ಚಾಮರಾಜಪೇಟೆ ವಾಲ್ಮೀಕಿ ನಗರದಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.

ಇಲ್ಲಿನ ಬಂಡೆಗುಡಿಸಲು ನಿವಾಸಿ ಚಿನ್ನರಾಜು(19) ಕೊಲೆಯಾದವ. ಘಟನೆ ಸಂಬಂಧ ರಮೇಶ್(19) ಎಂಬಾತನನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.

ಬಂಡೆ ಗುಡಿಸಲು ಪ್ರದೇಶದಲ್ಲಿ ಅಕ್ಕಪಕ್ಕದ ಮನೆಯಲ್ಲಿ ವಾಸವಿರುವ ಚಿನ್ನರಾಜು ಮತ್ತು ರಮೇಶ್ ಕೆ.ಆರ್.ಮಾರುಕಟ್ಟೆಯಲ್ಲಿ ಹೂವಿನ ಮೂಟೆ ಹೊರುವ ಕಾರ್ಮಿಕರಾಗಿದ್ದರು. ಚಿನ್ನರಾಜು ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ. ಅದೇ ಯುವತಿಯನ್ನು ರಮೇಶ್ ಕೂಡಾ ಪ್ರೀತಿಸುತ್ತಿದ್ದನಂತೆ. ಆದರೆ, ಆ ಯುವತಿ ಮಾತ್ರ ಚಿನ್ನರಾಜುನನ್ನು ಪ್ರೀತಿಸುತ್ತಿರಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು.

ಶನಿವಾರ ರಾತ್ರಿ 8 ಗಂಟೆಯಲ್ಲಿ ಇಬ್ಬರೂ ಗಾಂಜಾ ಸೇವಿಸಿ ಯುವತಿಯ ವಿಚಾರಕ್ಕೆ ಜಗಳ ಮಾಡಿಕೊಂಡಾಗ ರಮೇಶ್ ಚಾಕುವಿನಿಂದ ಚಿನ್ನರಾಜುನ ಕುತ್ತಿಗೆ ಮತ್ತು ಎದೆಭಾಗಕ್ಕೆ ಇರಿದಿದ್ದಾನೆ. ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಹಿಡಿದು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಚಿನ್ನರಾಜು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಮರಾಜಪೇಟೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Write A Comment