ಕರ್ನಾಟಕ

ನಟಿ ಹೇಮಶ್ರೀ ಕೊಲೆ ಪ್ರಕರಣ: ಉಲ್ಟಾ ಸಾಕ್ಷ್ಯ ಡೀಲ್ ಬಹಿರಂಗ

Pinterest LinkedIn Tumblr

Hemashree

ಬೆಂಗಳೂರು: ತೀವ್ರ ಸಂಚಲನ ಮೂಡಿಸಿದ್ದ ನಟಿ ಹೇಮಶ್ರೀ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗಳು ಆರೋಪಿ ಸುರೇಂದ್ರ ಬಾಬು ಪರ ಸಾಕ್ಷ್ಯ ನುಡಿದಿದ್ದಕ್ಕೆ ಲಕ್ಷಾಂತರ ರು. ಡೀಲ್ ನಡೆಸುತ್ತಿರುವ ದೃಶ್ಯಗಳು  ಬಿಡುಗಡೆಯಾಗಿವೆ.

ಹೇಮಶ್ರೀ ಕೊಲೆ ಪ್ರಕರಣದ ಆರೋಪಿ ಸದ್ಯ ಜೈಲಿನಲ್ಲಿರುವ ಸುರೇಂದ್ರ ಬಾಬು ಪರವಾಗಿ ಸಾಕ್ಷ್ಯ ನುಡಿದ ಆಂಧ್ರಪ್ರದೇಶದ ಮೂಲದ ಮಹೇಶ್, ಮೂವರು ಕಾರ್ಮಿಕರು ಹಾಗೂ ಕೃಷ್ಣ ಎಂಬಾತನೊಂದಿಗೆ, ಸುರೇಂದ್ರ ಬಾಬು ಸಹೋದರರಾದ ಮಣಿಪಾಲ್, ಜಯಪಾಲ್ ಹಾಗೂ  ಮಧ್ಯವರ್ತಿಯೊಬ್ಬ ಉಲ್ಟಾ  ಸಾಕ್ಷ್ಯ ಡೀಲ್ ನಡೆಸಿದ್ದಾನೆ.  ಇತ್ತೀಚೆಗೆ 46ನೇ ತ್ವರಿತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಪೊಲೀಸರ ತನಿಖೆ ವೇಳೆ ಸುರೇಂದ್ರ ವಿರುದ್ಧವಾಗಿ  ಹೇಳಿಕೆ ನೀಡಿದ್ದ ಸಾಕ್ಷಿಗಳು, ನ್ಯಾಯಾಲಯದ ವಿಚಾರಣೆ ವೇಳೆ ಉಲ್ಟಾ ಹೊಡೆದಿದ್ದಾರೆ. ಲಕ್ಷ ಲಕ್ಷ ಹಣದ ಆಮಿಷಕ್ಕೆ ಒಳಗಾಗಿ ಈ ಹೇಳಿಕೆ ನೀಡಿದ್ದಾರೆ.

ಆಗಿದ್ದೇನು: 2012 ಅ. 8ರಂದು ಬನಶಂಕರಿ ಮನೆಯಿಂದ ನಟಿ ಹೇಮಶ್ರೀಯನ್ನು  ಹೈದರಾಬಾದ್‌ದೆ ಕರೆದುಕೊಂಡು ಹೋಗುತ್ತಿರುವುದಾಗಿ ಆಕೆಯ ತಂದೆ ನಾಗರಾಜು ಅವರಿಗೆ ಸುರೇಂದ್ರ ಬಾಬು ಹೇಳಿದ್ದ. ಆದರೆ, ಹೈದ್ರಾಬಾದ್‌ಗೆ ಕರೆದೊಯ್ಯುವ ಮೊದಲೇ, ಅಂದರೆ ಅನಂತಪುರ  ಸಮೀಪ ಸ್ನೇಹಿತನ ಫಾರ್ಮ್‌ಹೌಸ್‌ಗೆ ಕರೆದೊಯ್ಯಲು ನಿರ್ಧರಿಸಿದ್ದ.

ರಾತ್ರಿ ತನ್ನ ಸ್ನೇಹಿತ ಮುರುಳಿಗೆ ಸುರೇಂದ್ರ ಕೆರೆ ಮಾಡಿದ್ದ . ಆದರೆ, ಆತ ಪ್ರತಿಕ್ರಿಯಿಸದ ಕಾರಣ ಮುರುಳಿ ಸ್ನೇಹಿತನಾದ ಕೃಷ್ಣ ಎಂಬಾತನಿಗೆ ಕರೆ ಮಾಡಿದ್ದ. ಈ ವೇಳೆ ಕೃಷ್ಣಫಾರ್ಮ್ ಹೌಸ್‌ನಲ್ಲಿರುವವ ಕಾರ್ಮಿಕರಾದ ಮಹೇಶ್ ಹಾಗೂ ಇತರರಿಗೆ ತಿಳಿಸಿ ನನ್ನ ಸ್ನೇಹಿತ ಹಾಗೂ ಆತನ ಪತ್ನಿ ಬರುತ್ತಿದ್ದಾರೆ. ಕೊಠಡಿ ಸಿದ್ಧಪಡಿಸಿ ಎಂದು ಹೇಳಿದ್ದ. ಹೀಗಾಗಿ ಕಾರ್ಮಿಕರು ಕೊಠಡಿ ಸಿದ್ಧಪಡಿಸಿದ್ದರು.

ಆದರೆ, ಹೇಮಶ್ರೀಯನ್ನು ಕರೆತಂದಾಗ ಆಕೆಗೆ ಪ್ರಜ್ಞೆ ಇರಲಿಲ್ಲ. ಇದರಿಂದ ಗಾಬರಿಯಾದ ಕಾರ್ಮಿಕರು ಆ ಬಗ್ಗೆ ಸುರೇಂದ್ರ ಅವರನ್ನು ಪ್ರಶ್ನಿಸಿದ್ದರು. ಏನೂ ಆಗಿಲ್ಲ ಮಲಗಿದ್ದಾಳೆ ಎಂದು ಹೇಳಿದ್ದ ಸುರೇಂದ್ರ, ಕಾರ್ಮಿಕರ ಸಹಾಯದಿಂದ ಹೇಮಶ್ರೀಯನ್ನು ಫಾರ್ಮ್‌ಹೌಸ್ ಒಳಗೆ ಎತ್ತಿಕೊಂಡು ಹೋಗಿದ್ದ.

ಈ ಬಗ್ಗೆ ಅನುಮಾನಗೊಂಡ ಮಹೇಶ ಸೇರಿ ನಾಲ್ವರು ಕಾರ್ಮಿಕರು, ಕೃಷ್ಣ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಇದರಿಂದ ಗಾಬರಿಗೊಂಡ ಕೃಷ್ಣ, ಹೇಮಶ್ರೀಯನ್ನು ಕರೆದುಕೊಂಡು ಫಾರ್ಮ್  ಹೌಸ್‌ನಿಂದ ಹೊರಡು ಸಮಸ್ಯೆಯಾಗುತ್ತದೆ ಎಂದು ಹೇಳಿದ್ದ.

ಉಲ್ಟಾ ಹೊಡೆದರು: ನ.9ರಂದು ಹೇಮಶ್ರೀ ಮೃತಪಟ್ಟಿರುವ ಬಗ್ಗೆ ಹೆಬ್ಬಾಳ ಠಾಣೆಯಲ್ಲಿ ಕೊಲೆ  ಪ್ರಕರಣ ದಾಖಲಾಗಿತ್ತು. ವಿಚಾರಣೆ ವೇಳೆ ಕೃಷ್ಣ, ಮಹೇಶ್ ಸೇರಿದಂತೆ ಐವರು ನಡೆದ ಘಟನೆಯನ್ನು  ಪೊಲೀಸರ ಬಳಿ ವಿವರಿಸಿದ್ದರು.

ಆದರೆ ಉಲ್ಟಾ ಹೇಳಿಕೆಗಾಗಿ ಕೃಷ್ಣನಿಗೆ ರು.2 ಲಕ್ಷ ಹಾಗೂ ಉಳಿದ ನಾಲ್ವರಿಗೆ ತಲಾ ರು.1 ಲಕ್ಷ  ಹಣದ ಆಮಿಷವನ್ನು ಸುರೇಂದ್ರ ಬಾಬು ಸಹೋದರರು ಹಾಗೂ ವಕೀಲರು ಒಡ್ಡಿದ್ದರು ಎನ್ನಲಾಗಿದೆ. ಹಾಗಾಗಿಯೇ, ನ್ಯಾಯಾಲಯದಲ್ಲಿ ಫಾರ್ಮ್‌ಹೌಸ್‌ಗೆ ಬಂದಾಗ ಆಕೆ ಚೆನ್ನಾಗಿಯೇ ಇದ್ದಳು. ಕಾರಿನಿಂದ ನಡೆದುಕೊಂಡು ಒಳಗೆ ಹೋಗಿದ್ದಾಳೆ ಎಂದು ನಾಲ್ವರೂ ಹೇಳಿಕೆ ನೀಡಿದ್ದರು. ಆದರೆ, ಸುರೇಂದ್ರನ ಸಹೋದರರು ಮುಂಚಿತವಾಗಿ ಹೇಳಿದಷ್ಟು ಹಣ ನೀಡುವ ಬದಲು ಎಲ್ಲ ಸಾಕ್ಷಿಗಳಿಗೆ ತಲಾ ರು.20  ಸಾವಿರ ಕೈಗಿಟ್ಟು ಕೈತೊಳೆದುಕೊಳ್ಳಲು ಮುಂದಾಗಿದ್ದರು.

ಆದರೆ, ಕೃಷ್ಣ  ಮಾತ್ರ ಇದಕ್ಕೆ ಒಪ್ಪದೆ, ಮುಂಚಿತವಾಗಿ ಹೇಳಿದಂತೆ ಹಣ ನೀಡಬೇಕು ಎಂದು ಪಟ್ಟು ಹಿಡಿದು ಜಗಳ ಮಾಡಿದ್ದಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಮಾಧ್ಯಮಕ್ಕೆ ಲಭಿಸಿದೆ.

ಮತ್ತೊಂದು ತುಣುಕು

ಒಂದು ವೇಳೆ  ನಾನು ಸಾಕ್ಷಿ ಹೇಳದಿದ್ದರೆ ಕೇಸ್ ಏನಾಗುತ್ತಿತ್ತು. ನಿಮ್ಮ ಮೇಲಿನ ನಂಬಿಕೆಯಿಂದ  ಸಾಕ್ಷಿ  ಹೇಳಿದ್ದೇನೆ. ನಿಮ್ಮ  ಮೇಲಿನ ನಂಬಿಕೆಯಿಂದ ಸಾಕ್ಷಿ ಹೇಳಿದ್ದೇನೆ. ಊರಲ್ಲಿ ಚಿನ್ನ ಅಡ ಇಟ್ಟಿದ್ದೇನೆ. ನೀವು ದೊಡ್ಡವರು ಈ ರೀತಿ ವ್ಯವಹಾರ ಮಾಡಬಾರದು. ರು.22 ಲಕ್ಷ ಕೇಳಿದ್ದೆ. ಕೊಡುವುದಾಗಿ ಒಪ್ಪಿಕೊಂಡಿದ್ದಿರಿ. ಬೇಕಿದ್ದರೆ ವಕೀಲರಾದ ಚಂದ್ರು ಅವರನ್ನೇ ಕೇಳಿ . ನಾವು ಆಂಧ್ರಪ್ರದೇಶದಿಂದ ಬರಲು ವಾಹನ ಬಾಡಿಗೆ ರು. 20 ಸಾವಿರ ಆಗುತ್ತದೆ. ರು. 20 ಸಾವಿರ ತೆಗೆದುಕೊಳ್ಳಲು ಇಷ್ಟು ದೂರ ಬರಬೇಕಾ? ಮಾತುಕತೆಯಂತೆ ಹಣ ಕೊಡಿ. ಈ ಪ್ರಕರಣದಲ್ಲಿ ನಾವು ಜೈಲಿಗೆ ಹೋಗಬೇಕಾಗುತ್ತಿತ್ತು ಎಂದು ಕೃಷ್ಣ ಹೇಳುತ್ತಾನೆ.

ಅಲ್ಲದೇ ವಕೀಲ ಚಂದ್ರ ಅವರೊಂದಿಗೂ ಮಾತನಾಡಿ ರು. 2 ಲಕ್ಷ ಎಂದಿದ್ದಿರಿ. ಈಗ ರು.1 ಲಕ್ಷ ಕೊಟ್ಟಿದ್ದಾರೆ. ಕೇಳಿದರೆ ಏನೇನೋ ಕಥೆ ಹೇಳುತ್ತಾರೆ. ಆ ಹುಡುಗರನ್ನು (ಪ್ರತ್ಯಕ್ಷ ಸಾಕ್ಷಿಗಳು) ಹೇಗೆ ಕರೆತರಲಿ. ಎಂತಾ ದೊಡ್ಡ ಕೇಸ್ ಇದು. ಇಂತಹ ಕೇಸಿನಲ್ಲಿ ತಪ್ಪಿಸಿಕೊಳ್ಳುವುದು ಎಂದರೆ ಸಾಮಾನ್ಯನಾ. ಗೃಹ ಸಚಿವರ ಬಳಿ ಹೋಗಿದ್ದ ಕೇಸ್ ಇದು ಎಂದು ಕೃಷ್ಣ ಕೋಪ ಹಾಗೂ ಅಸಮಾಧಾನದಿಂದ ಮಾತನಾಡುತ್ತಾನೆ.

ಈ ವೇಳೆ ಸುರೇಂದ್ರ ಬಾಬು ಸಹೋದರ ಜಯಪಾಲ, ಮಧ್ಯವರ್ತಿ ಹಾಗು ಮೊಬೈಲ್ ಫೋನ್‌ನಲ್ಲಿ ವಕೀಲ ಸೇರಿ ಕೃಷ್ಣ ಅವರನ್ನು ಸಮಾಧಾನ ಮಾಡಲು ಯತ್ನಿಸುತ್ತಾರೆ. ಅಲ್ಲದೇ ನೀವು ಕೇಳಿದಷ್ಟು ಹಣ ಕೊಡುವುದಾಗಿ ಒಬ್ಬರು ಹೇಳಿದರೆ, ಮತ್ತೊಬ್ಬರು ಅಷ್ಟು ಹಣ ನೀಡಲಾಗದು. ಅಷ್ಟು ಹೇಳಿಯೇ ಇಲ್ಲ ಎನ್ನುತ್ತಾರೆ.

ಇದರಿಂದ ಮತ್ತಷು ಅಸಮಾಧಾನಗೊಳ್ಳುವ ಕೃಷ್ಣ ಇದು ಮೋಸದ ವ್ಯವಹಾರ. ನನಗೆ ದುಡ್ಡು ಬೇಕು ಅಷ್ಟೇ. ರು.20 ಸಾವಿರ ಯಾವುದಕ್ಕೂ ಆಗುವುದಿಲ್ಲ. ಬೇಡ ಬಿಡಿ. ನಂಬಿದರೆ ಹಿಂಗೆಲ್ಲಾ ಮಾಡುವುದಾ? ನನಗೆ ಇದೆಲ್ಲಾ ಬೇಡ ಎನ್ನುತ್ತಾನೆ.

ನಟಿ ಹೇಮಾಶ್ರೀ ಕೊಲೆ ಪ್ರಕರಣ ದಿಕ್ಕು ತಪ್ಪಿದೆ ಎನ್ನುವುದು ಮಾಧ್ಯಮಗಳಿಗೆ ಸಿಕ್ಕಿರುವ ವಿಡಿಯೋ ಹಾಗೂ ಸಂಭಾಷಣೆಯಿಂದಲೇ ಗೊತ್ತಾಗುತ್ತದೆ.

ವಿಡಿಯೋ ತುಣುಕಿನಲ್ಲೇನಿದೆ?

ಸಾಕ್ಷಿಗಾರ ಮತ್ತು ಸುರೇಂದ್ರ ಬಾಬು ಸಹೋದರ ಮಣಿಪಾಲ್ ಮಾತುಕತೆ

ಕೃಷ್ಣ (ಸಾಕ್ಷಿ) : ಎರಡರಿಂದ ಮೂರು ಲಕ್ಷ ಕೊಡುವುದಾಗಿ ಹೇಳಿದ್ದಿರಿ. ಆದರೆ, ಬರೀ ರು. 25  ಸಾವಿರ ನೀಡುತ್ತಿದ್ದೀರಾ. ನೀವು ಮಾತಿಗೆ ತಪ್ಪುತ್ತಿದ್ದೀರಾ..ನಿಮಗಾಗಿ ಅನಂತಪುರದಲ್ಲಿ ಎಷ್ಟು ಕಷ್ಟಪಟ್ಟಿದ್ದೇನೆ ಎನ್ನುವುದು ನನಗೆ ಗೊತ್ತು. ನೀವು ಜೈಲಿಗೆ ಹೋಗಬೇಕಾಗುತ್ತಿತ್ತು.

ಮಣಿಪಾಲ್: ಆಯ್ತು, ಬೇಜಾರು ಮಾಡಿಕೊಳ್ಳಬೇಡ. ನ. 20ರಂದು 100 ಪರ್ಸೆಂಟ್ ಕೊಡುತ್ತೇನೆ.

ಮೂರನೇ ವ್ಯಕ್ತಿ: ಬೇಜಾರು ಮಾಡಿಕೊಳ್ಳಬೇಡ. ನಿನಗೆ ಬರಬೇಕಾದದ್ನ್ನು ಕೊಡುತ್ತೇವೆ.

ಕೃಷ್ಣ: ನಿಮ್ಮ ಮಾತನ್ನೆ ನೀವು ಹೇಳುತ್ತಿದ್ದಿರಾ…ನಿಮಗೆ ಸಹಕಾರ ಮಾಡಿದ್ದೇ ತಪ್ಪಾ

ಮಣಿಪಾಲ: ಖಂಡಿತ ನಿನಗೆ ಹೇಳಿದಷ್ಟು  ಕೊಡುತ್ತೇವೆ. ನಾವೆಲ್ಲಿ ಮೋಸ ಮಾಡುತ್ತಿದ್ದೇವೆ ಎಂದು ಭಯ ಬೀಳುತ್ತಿದ್ದಾನೆ. (ಮೂರನೇ ವ್ಯಕ್ತಿ ಉದ್ದೇಶಿಸಿ ಮಾತನಾಡಲಾಗಿದೆ)

ಕೃಷ್ಣ: ರು.25 ಸಾವಿರ ಕೊಟ್ಟು ಕಳಿಸುತ್ತಿದ್ದೀರಲ್ಲಾ, ನಿಮಗೆ ಎಷ್ಟು ಬುದ್ದಿ ಇರಬೇಕು.

ಮಣಿಪಾಲ: ಮಾತನಾಡಿದ ಮೇಲೆ ನಿನಗೆ ಅರೇಂಜ್ ಮಾಡಬೇಕಲ್ಲಪ್ಪ. ನಾನು ಅರೇಂಜ್ ಮಾಡುತ್ತೇನೆ. ಬೇಜಾರು ಮಾಡಿಕೊಳ್ಳಬೇಡ. ನ. 20ಕ್ಕೆ ಪೂರ್ತಿ ಕೊಡುತ್ತೇನೆ.

ಕೃಷ್ಣ: ನ.20ನೇ ತಾರೀಖಿಗೆ ಬಾಕಿ ರು.75 ಸಾವಿರ ಕೊಡಲೇಬೇಕು.

ಸಂಭಾಷಣೆಯಲ್ಲೇನಿತ್ತು?

ನಾಲ್ವರಿಗೆ ತಲಾ ರು.1 ಲಕ್ಷ, ಕೃಷ್ಣನಿಗೆ ರು.2 ಲಕ್ಷ!

ಪ್ರಕರಣದಲ್ಲಿ ನನ್ನದು ಸೇರಿದಂತೆ ಪ್ರತಿಯೊಬ್ಬರಿಂದ ಎರಡೆರಡು ಲಕ್ಷ ಹೋಗಿದೆ. ನಾವು ಪಡೆಯುತ್ತಿರುವುದು, ನಾವೇ ಖರ್ಚು ಮಾಡಿರುವ ದುಡ್ಡು. ಒಂದು ವೇಳೆ ನಾವು ಜೈಲಿಗೆ ಹೋದರೆ ನೀವು ಕೊಡುವ ರು.20 ಸಾವಿರದಿಂದ ನಮ್ಮ ಕುಟುಂಬವನ್ನು ನೋಡಿಕೊಳ್ಳುವವರು ಯಾರು? . ಸುರೇಂದ್ರ ಅವರ ಮೇಲಿನ ಪ್ರೀತಿಯಿಂದ ರಿಸ್ಕ್ ತೆಗೆದುಕೊಂಡರೂ ಪರವಾಗಿಲ್ಲ ಎಂದು ಈ ಕೆಲಸ ಮಾಡಿದ್ದೇವೆ ಎಂದು ಕೃಷ್ಣ ಹೇಳಿದ್ದಾನೆ . ಮಧ್ಯವರ್ತಿ ಮಾತನಾಡಿ, ಸ್ವತಃ ಬಾಬಣ್ಣ ಎಲ್ಲರಿಗೂ ಒಂದೊಂದು ಲಕ್ಷ ಹಾಗು ನಿನಗೆ ಪ್ರತ್ಯೇಕವಾಗಿ ಒಂದೂವರೆ ಲಕ್ಷ ಕೊಡು ಎಂದಿದ್ದಾನೆ. ಹೀಗಾಗಿ ಕೊಟ್ಟೆ ಕೊಡುತ್ತೇವೆ ಎನ್ನುತ್ತಾನೆ.

Write A Comment