ಕರ್ನಾಟಕ

ಸಿಎಂ ವಿರುದ್ಧ ಕೇಸ್: ಗವರ್ನರ್ ಅನುಮತಿ ಪಡೆಯಲು ಮುಂದಾದ ಬಿಜೆಪಿ

Pinterest LinkedIn Tumblr

siddaramaiah

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣವನ್ನೇ ದಾಳವಾಗಿ ಬಳಸಿಕೊಳ್ಳಲು ಪ್ರತಿಪಕ್ಷ ಬಿಜೆಪಿ ನಿರ್ಧರಿಸಿದ್ದು, ಸಿಎಂ ವಿರುದ್ಧವೇ ಪ್ರಕರಣ ದಾಖಲಿಸಲು ರಾಜ್ಯಪಾಲರ ಅನುಮತಿ ಪಡೆಯಲು ಬಿಜೆಪಿ ಮುಂದಾಗಿದೆ.

ಈ ಸಂಬಂಧ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಲು ನಿರ್ಧರಿಸಿರುವ ರಾಜ್ಯ ಬಿಜೆಪಿ ನಾಯಕರು, ಕೇಂದ್ರ ನಾಯಕತ್ವದ ಅನುಮತಿಗಾಗಿ ಕಾಯುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರೊಬ್ಬರು ಇದನ್ನು ಖಚಿತಪಡಿಸಿದ್ದು, ಸಿಎಂ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯಪಾಲರ ಅನುಮತಿ ಪಡೆಯುವ ಬಗ್ಗೆ ಈಗಾಗಲೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ತಿಳಿಸಲಾಗಿದೆ. ಇಂತಹ ದೊಡ್ಡ ನಿರ್ಧಾರವನ್ನು ಪಕ್ಷದ ರಾಷ್ಟ್ರೀಯ ನಾಯಕರ ಗಮನಕ್ಕೆ ತರದೆ ನಾವು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ನಾವು ಮುಂದಿನ ಎರಡು ವಾರಗಳಲ್ಲಿ ದೆಹಲಿಗೆ ಭೇಟಿ ನೀಡಿ, ಪ್ರಕರಣ ದಾಖಲಿಸಲು ಹೈಕಮಾಂಡ್‌ನಿಂದ ಅನುಮತಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯ ಬಿಜೆಪಿ ಘಟಕ ಸಹ ಕೇಂದ್ರ ನಾಯಕರ ಅನುಮತಿ ಪಡೆದ ನಂತರವೇ ರಾಜ್ಯಪಾಲರನ್ನು ಭೇಟಿ ಮಾಡುವ ನಿರ್ಧಾರಕ್ಕೆ ಬಂದಿದೆ. ಒಂದು ವೇಳೆ ರಾಜ್ಯಪಾಲರು ಪ್ರಕರಣ ದಾಖಲಿಸಲು ಅನುಮತಿ ನೀಡದಿದ್ದರೆ ಪಕ್ಷಕ್ಕೆ ಮುಜುಗರವಾಗುತ್ತದೆ. ಹೀಗಾಗಿ ಕೇಂದ್ರ ನಾಯಕರ ಅನುಮತಿ ಪಡೆದರೆ, ರಾಜಭವನದ ಅನುಮತಿ ಸಿಕ್ಕೆ ಸಿಗುತ್ತದೆ ಎನ್ನುತ್ತಾರೆ ಮತ್ತೊಬ್ಬ ಬಿಜೆಪಿ ನಾಯಕ.

ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ನಮ್ಮದೇಯಾದ ಮೂಲಗಳಿಂದ ಸಾಕಷ್ಟು ಮಾಹಿತಿಗಳನ್ನು ಮತ್ತು ದಾಖಲೆಗಳನ್ನು ಸಂಗ್ರಹಿಸಿದ್ದೇವೆ. ಅಲ್ಲದೆ ಈ ಬಗ್ಗೆ ಕಾನೂನು ಸಲಹೆಯನ್ನೂ ಪಡೆಯಲಾಗಿದೆ ಎಂದು ಇಬ್ಬರು ನಾಯಕರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ರಮವಾಗಿ ಡಿನೋಟಿಫಿಕೇಶ್ ಮಾಡಿದ್ದಾರೆ ಎಂದು ಕಳೆದ ವಿಧಾನಸಭಾ ಅಧಿವೇಶನದ ವೇಳೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ ಈ ಸಂಬಂಧ ಮಾಜಿ ಸಚಿವರಾದ ಎಸ್.ಸುರೇಶ್ ಕುಮಾರ್ ಹಾಗೂ ವಿ.ಸೋಮಣ್ಣ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿತ್ತು.

ಸತ್ಯ ಶೋಧನಾ ಸಮಿತಿ ಮಧ್ಯಂತರ ವರದಿ ಬಿಡುಗಡೆ ಮಾಡಿದ್ದು, ವರದಿಯಲ್ಲಿ ಅರ್ಕಾವತಿ ಬಡಾವಣೆಯಲ್ಲಿ ‘ರೀ ಡು’ ಹೆಸರಿನಲ್ಲಿ ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಹೈಕೋರ್ಟ್ ಮಾರ್ಗದರ್ಶನದಂತೆ ಕೇವಲ 140 ಎಕರೆ ಡಿನೋಟಿಫೈಗೆ ಅವಕಾಶವಿತ್ತು. ಆದರೆ ಸುಪ್ರೀಂ ಹಾಗೂ ಹೈಕೋರ್ಟ್ ಆದೇಶ ಉಲ್ಲಂಘಿಸಿ 707 ಎಕರೆಗಳನ್ನು ‘ರೀ ಡು’ ಮಾಡಲಾಗಿದೆ ಎಂದು ದೂರಲಾಗಿದೆ.

ಇನ್ನು ಮುಂದಿನ ತಿಂಗಳು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲೂ ಇದೇ ಪ್ರಕರಣವನ್ನೆ ಮುಂದಿಟ್ಟುಕೊಂಡು ಸಿದ್ದು ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯಲು ಬಿಜೆಪಿ ಸಿದ್ಧತೆ ನಡೆಸಿದೆ.

Write A Comment