ಕರ್ನಾಟಕ

ಯುವ ಪೀಳಿಗೆಯ ಆಶೋತ್ತರಗಳಿಗೆ ಸ್ಪಂದನೆ;ಸಾಮಾಜಿಕ ಸಂಪರ್ಕ ಜಾಲ ತಾಣಗಳಿಗೆ ಸಿಎಂ ಪ್ರವೇಶ

Pinterest LinkedIn Tumblr

CM-Website-01

ಬೆಂಗಳೂರು, ಸೆ.22: ಸುಶಿಕ್ಷಿತ, ಯುವ ಸಮುದಾಯದೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ ಉದ್ದೇಶದಿಂದ ಸಾಮಾಜಿಕ ಸಂಪರ್ಕ ಜಾಲತಾಣಗಳಾದ ವೆಬ್‌ಸೈಟ್, ಫೇಸ್‌ಬುಕ್, ಟ್ವಿಟರ್, ಯೂಟೂಬ್‌ಗೆ ಪ್ರವೇಶ ಮಾಡುತ್ತಿರುವು ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಯ ವೆಬ್‌ಸೈಟ್(www. cmkarnataka.gov.in), ಫೇಸ್‌ಬುಕ್ (cmofkarnataka) ಹಾಗೂ ಟ್ವಿಟರ್(@cmofkarnataka) ಸಾಮಾಜಿಕ ಸಂಪರ್ಕ ಜಾಲತಾಣಗಳಲ್ಲಿನ ತಮ್ಮ ಖಾತೆಗೆ ಅವರು ಚಾಲನೆ ನೀಡಿದರು.

ಸಾಮಾಜಿಕ ಸಂಪರ್ಕ ಜಾಲತಾಣಗಳಿಗೆ ಪ್ರವೇಶ ಮಾಡಬೇಕೆಂಬುದು ಹಲವಾರು ವರ್ಷಗಳಿಂದ ಬಯಕೆಯಿತ್ತು. ನನ್ನ ಸ್ನೇಹಿತರು, ಹಿತೈಷಿಗಳ ಪೈಕಿ ಹಲವಾರು ಮಂದಿ ಈ ಬಗ್ಗೆ ಸಲಹೆಗಳನ್ನು ನೀಡಿದ್ದರು. ಆದರೆ, ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಇದೀಗ ಕಾಲ ಕೂಡಿ ಬಂದಿದೆ ಎಂದು ಅವರು ಹೇಳಿದರು.

ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ ದಿನದಿಂದ ಇದುವರೆಗೆ ಜನರೊಂದಿಗೆ ನೇರ ಸಂಪರ್ಕವಿಟ್ಟುಕೊಂಡಿದ್ದೇನೆ. ಆದರೆ, ಇದೀಗ ಕಾಲ ಬದಲಾಗಿದೆ. 2011ರ ಜನಗಣತಿಯ ಪ್ರಕಾರ ಸಮಾಜದಲ್ಲಿ ಶೇ.60ರಷ್ಟು ಮಂದಿ 35 ವರ್ಷದೊಳಗಿನವರಿದ್ದಾರೆ. ಯುವ ಪೀಳಿಗೆಯ ಆಶೋತ್ತರಗಳಿಗೆ ಸ್ಪಂದಿಸಲು ಸಾಮಾಜಿಕ ತಾಣಗಳ ಬಳಕೆ ಅಗತ್ಯ ಮತ್ತು ಅನಿವಾರ್ಯ ಎಂದು ಅವರು ತಿಳಿಸಿದರು.

ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಸಾಮಾಜಿಕ ತಾಣಗಳು ಸಹಕಾರಿ. ಈ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಗಮನಕ್ಕೆ ತರಲು ಬಯಸುವ ಸಾರ್ವಜನಿಕ ಹಿತಾಸಕ್ತಿಯ ದೂರು-ದುಮ್ಮಾನಗಳನ್ನು ದಾಖಲಿಸಬಹುದು ಎಂದು ಸಿದ್ದರಾಮಯ್ಯ ಹೇಳಿದರು.

ಟ್ವೀಟ್ ಮಾಡುವುದನ್ನು ಕಲಿಯುತ್ತೇನೆ: ಇದುವರೆಗೆ ತಾನು ಸಾಮಾಜಿಕ ಸಂಪರ್ಕ ಜಾಲತಾಣಗಳನ್ನು ಬಳಸಿಲ್ಲ. ಆದರೆ, ಇನ್ನು ಮುಂದೆ ಅವುಗಳನ್ನು ಯಾವ ರೀತಿ ಬಳಕೆ ಮಾಡಬೇಕು ಎಂಬುದರ ಕುರಿತು ಕಲಿತುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಟ್ವಿಟರ್‌ನಲ್ಲಿ ಸಂದೇಶ ನೀಡುವುದು ಹೇಗೆ ಎಂಬುದನ್ನು ಕಲಿತು, ನಾನೇ ಟ್ವೀಟ್ ಮಾಡುತ್ತೇನೆ. ಅಲ್ಲಿಯವರೆಗೆ ನನ್ನ ಅಭಿಪ್ರಾಯವನ್ನು ತಿಳಿದು ಅಧಿಕಾರಿಗಳು ಟ್ವೀಟ್ ಮಾಡುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.

ವೆಬ್‌ಸೈಟ್ ವಿಶೇಷತೆ: ಮುಖ್ಯಮಂತ್ರಿಯ ವೆಬ್‌ಸೈಟ್‌ನಲ್ಲಿ ಸಿದ್ದರಾಮಯ್ಯನವರ ವ್ಯಕ್ತಿಚಿತ್ರ, ರಾಜ್ಯದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ನೀಡಿರುವ ಸಂದೇಶಗಳು, ಪಾಲ್ಗೊಳ್ಳುವ ಸಾರ್ವಜನಿಕ ಕಾರ್ಯಕ್ರಮಗಳ ವಿವರ, ರಾಜ್ಯದ ವಾರ್ತಾ ಇಲಾಖೆ ನೀಡುವ ಪ್ರಕಟನೆಗಳು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಇಲ್ಲಿಯವರೆಗಿನ ಪ್ರಮುಖ ಸಾಧನೆಗಳ ಕೈ ಪಿಡಿಗಳು ಲಭ್ಯವಿದೆ.

ರಾಜ್ಯ ಸರಕಾರದ ಪ್ರಮುಖ ಯೋಜನೆಗಳ ವಿವರ, ಎರಡು ಬಜೆಟ್‌ಗಳ ಪೂರ್ಣ ಪಾಠ ಮತ್ತು ಆ ಬಗ್ಗೆ ಮಾಧ್ಯಮಗಳಲ್ಲಿ ವ್ಯಕ್ತವಾಗಿರುವ ಪ್ರತಿಕ್ರಿಯೆ. ಮುಖ್ಯಮಂತ್ರಿ ಭಾಗವಹಿಸಿದ ಕಾರ್ಯಕ್ರಮಗಳ ಇತ್ತೀಚಿನ ಛಾಯಾಚಿತ್ರಗಳು, ವೀಡಿಯೊ ಮತ್ತು ಆಡಿಯೋ ತುಣುಕುಗಳಿವೆ. ಅಲ್ಲದೆ, ಮುಖ್ಯಮಂತ್ರಿ ಪಾಲ್ಗೊಂಡಿದ್ದ ಕಾರ್ಯಕ್ರಮಗಳ ಪತ್ರಿಕಾ ವರದಿಗಳು, ದಿನ ಪತ್ರಿಕೆಗಳ ವೆಬ್‌ಪೇಪರ್ ಕೊಂಡಿಗಳ ಲಿಂಕ್ ಇದೆ.

ರಾಷ್ಟ್ರಪತಿ, ಪ್ರಧಾನಮಂತ್ರಿ, ಲೋಕಸಭೆ, ರಾಜ್ಯಸಭೆ ಮತ್ತು ಕೇಂದ್ರ ಸಚಿವ ಸಂಪುಟಗಳ ಜಾಲ ತಾಣಗಳಿಗೆ, ರಾಜ್ಯದ ರಾಜ್ಯಪಾಲರು ಮತ್ತು ರಾಜ್ಯ ವಿಧಾನಮಂಡಲಗಳ ಜಾಲತಾಣಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದಲ್ಲದೆ, ಭೂಮಿ, ಸಕಾಲ, ಕರ್ನಾಟಕ ಓನ್, ನಾಡ ಕಚೇರಿ, ಕರ್ನಾಟಕ ವೆಬ್ ಪೋರ್ಟಲ್, ಹವಾಮಾನ ವರದಿ, ಇ-ಪ್ರೊಕ್ಯೂರ್‌ಮೆಂಟ್, ವಾರ್ತಾ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳಿಗೆ ಸಂಬಂಧಿಸಿದ ಲಿಂಕ್‌ಗಳನ್ನು ಕಲ್ಪಿಸಲಾಗಿದೆ.

ಮುಖ್ಯಮಂತ್ರಿಯ ಫೇಸ್‌ಬುಕ್ ಖಾತೆಗೆ ಈಗಾಗಲೇ 14 ಸಾವಿರಕ್ಕಿಂತ ಹೆಚ್ಚಿನ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಮಾರು 40 ಸಾವಿರ ವಿಚಾರಗಳ ವಿನಿಮಯವಾಗಿದೆ. ಯೂಟ್ಯೂಬ್‌ನಲ್ಲಿ ಮುಖ್ಯಮಂತ್ರಿಯ ಭಾಗವಹಿಸಿದ ಕಾರ್ಯಕ್ರಮಗಳ ವೀಡಿಯೋ ತುಣುಕುಗಳಿರುತ್ತವೆ.

ವೆಬ್‌ಸೈಟ್ ಹಾಗೂ ಸಾಮಾಜಿಕ ಸಂಪರ್ಕ ಜಾಲ ತಾಣಗಳ ಉದ್ಘಾಟನೆಯ ಸಂದರ್ಭದಲ್ಲಿ ಮೂಲಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವ ಆರ್.ರೋಷನ್ ಬೇಗ್, ಹೊಸದಿಲ್ಲಿಯಲ್ಲಿ ರಾಜ್ಯದ ವಿಶೇಷ ಪ್ರತಿನಿಧಿ ಅಪ್ಪಾಜಿ ನಾಡಗೌಡ, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು, ಸಾಮಾಜಿಕ ಜಾಲ ತಾಣಗಳ ವಿಶೇಷ ಅಧಿಕಾರಿ ಶಿರೀಷ್ ರುದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

‘ಜನರನ್ನು ಪ್ರಚೋದಿಸಿದರೆ ಕಠಿಣ ಕ್ರಮ’
ಯಾರೋ ಏನೋ ಹೇಳಿದರೆ ರಾಜ್ಯ ಇಬ್ಭಾಗವಾಗುವುದಿಲ್ಲ. ಅನಗತ್ಯವಾಗಿ ರಾಜ್ಯವನ್ನು ವಿಭಜನೆ ಮಾಡುವ ಹೇಳಿಕೆಗಳನ್ನು ನೀಡಿ ಜನರ ಪ್ರಚೋದನೆ ಮಾಡುವ ಸಾಹಸಕ್ಕೆ ಯಾರಾದರೂ ಕೈ ಹಾಕಿದರೆ, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

Write A Comment