ಕರ್ನಾಟಕ

ಅತಿವೃಷ್ಟಿಗೆ ಸರಿಯಾಗಿ ಪರಿಹಾರ ನೀಡದೆ ನಿದ್ರೆ ಮಾಡುತ್ತಿರುವ ರಾಜ್ಯ ಸರ್ಕಾರ: ರೇಣುಕಾಚಾರ್ಯ, ಬೇಳೂರು ವಾಗ್ದಾಳಿ

Pinterest LinkedIn Tumblr

renukachaa

ಬೆಂಗಳೂರು, ಸೆ.18: ಮಳೆಯಿಂದಾಗಿ ಅತಿವೃಷ್ಟಿಗೆ ಒಳಗಾಗಿರುವ ಪ್ರದೇಶಗಳಿಗೆ ರಾಜ್ಯಸರ್ಕಾರ ಸರಿಯಾಗಿ ಪರಿಹಾರ ನೀಡದೆ ನಿದ್ರೆ ಮಾಡುತ್ತಿದೆ, ರೈತರನ್ನು ವಂಚಿಸುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದರು.

ಜಂಟಿ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಸಚಿವ ಕೃಷ್ಣಭೈರೇಗೌಡ, ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್, ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಇನ್ನೂ ನಿದ್ರೆಯಿಂದ ಎಚ್ಚೆತ್ತಿಲ್ಲ ಎಂದು ಟೀಕಿಸಿದರು.

ದಾವಣಗೆರೆ ಜಿಲ್ಲೆ ಸೇರಿದಂತೆ ವಿವಿಧೆಡೆ ಮಳೆಯಿಂದ ಭಾರೀ ನಷ್ಟ ಉಂಟಾಗಿದೆ. ಈವರೆಗೆ ಸರ್ಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ. ಅಡಿಕೆ, ಶೇಂಗಾ, ಹತ್ತಿ, ಮೆಕ್ಕೆಜೋಳ, ಶುಂಠಿ, ಬಾಳೆ ಮತ್ತಿತರ ವಾಣಿಜ್ಯ ಬೆಳೆ ಕೊಚ್ಚಿಹೋಗಿದೆ. ರೈತರು ಕಂಗಾಲಾಗಿದ್ದಾರೆ. ಇದುವರೆಗೆ ಈ ಭಾಗಗಳಿಗೆ ಸಚಿವರಾಗಲಿ, ಶಾಸಕರಾಗಲಿ ಭೇಟಿ ನೀಡಿಲ್ಲ. ಸರಿಯಾದ ಸಮೀಕ್ಷೆಯಾಗಿಲ್ಲ ಎಂದು ಕಿಡಿಕಾರಿದರು.

ಅಧಿಕಾರಿಗಳು ಕಾಟಾಚಾರಕ್ಕೆ ಸಮೀಕ್ಷೆ ಮಾಡಿ ಸುಳ್ಳು ವರದಿ ನೀಡಿದ್ದಾರೆ. ಕಂದಾಯ ಸಚಿವರು ಬೆಂಗಳೂರು, ಮೈಸೂರಿಗೆ ಸೀಮಿತವಾಗಿದ್ದಾರೆ. ಶಾಮನೂರು ಶಿವಶಂಕರಪ್ಪ ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಕೃಷಿ ಸಚಿವರಂತೂ ಕೇಳುವಂತೆಯೇ ಇಲ್ಲ. ಇಂತಹ ಬೇಜವಾಬ್ದಾರಿ ಸರ್ಕಾರ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಸಂಪುಟ ವಿಸ್ತರಣೆ ಕಸರತ್ತು, ನಿಗಮ-ಮಂಡಳಿ ನೇಮಕದ ಬಗ್ಗೆ ಕಾಲ ಕಳೆಯುತ್ತಿದೆ. ಬಡ ರೈತರನ್ನು ನಿರ್ಲಕ್ಷಿಸಿದೆ. ನಮ್ಮ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿಗಳಾದ ಈಶ್ವರಪ್ಪ, ಆರ್.ಅಶೋಕ್ ಅತಿವೃಷ್ಟಿ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಕೇಂದ್ರಕ್ಕೆ ನಿಯೋಗ ಕೊಂಡೊಯ್ದರೆ ಅಗತ್ಯ ನೆರವು ಕೊಡಿಸುವುದಾಗಿ ಭರವಸೆ ನೀಡಿದ್ದರೂ ಕೂಡ ಮುಖ್ಯಮಂತ್ರಿಗಳು ಇದುವರೆಗೆ ನಿಯೋಗವನ್ನೇ ಕೊಂಡೊಯ್ದಿಲ್ಲ ಎಂದು ದೂರಿದರು.

ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಸೆ.22ರಂದು ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತೇವೆ. ಸರ್ಕಾರವನ್ನು ಬಡಿದೆಬ್ಬಿಸುವ ಕಾರ್ಯವನ್ನು ಮಾಡುತ್ತೇವೆ ಎಂದು ರೇಣುಕಾಚಾರ್ಯ ಎಚ್ಚರಿಸಿದರು. ಸರ್ಕಾರದ ವಿರುದ್ಧ ಬೇಳೂರು ವಾಗ್ದಾಳಿ: ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸದನದಲ್ಲಿ ಸರ್ಕಾರ ನಿದ್ರಾವಸ್ಥೆಯಲ್ಲಿದೆ. ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ ಎಂದೆಲ್ಲ ಕೂಗಾಡುತ್ತಾರೆ. ಆದರೆ, ಅವರೇ ಪ್ರತಿನಿಧಿಸುವ ಸಾಗರ ಕ್ಷೇತ್ರದ ಸೊಪ್ಪಿನಗುಡ್ಡ ತೆರವುಗೊಳಿಸಲು ನೋಟಿಸ್ ಬಂದಿದ್ದರೂ ಇದುವರೆಗೆ ಚಕಾರವೆತ್ತದೆ ಮೌನ ವಹಿಸಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಈ ವೇಳೆ ತೀವ್ರ ವಾಗ್ದಾಳಿ ನಡೆಸಿದರು. ಬಗರ್‍ಹುಕುಂ ಸಾಗುವಳಿ ಬಗ್ಗೆ ಕಾಗೋಡು ತಿಮ್ಮಪ್ಪ ಮಾತನಾಡುತ್ತಾರೆ. ತಮ್ಮ ಕ್ಷೇತ್ರದಲ್ಲೇ ಸಮಸ್ಯೆಗಳು ಕಾಣುತ್ತಿದ್ದರೂ ಸುಮ್ಮನಿದ್ದಾರೆ ಎಂದು ಆರೋಪಿಸಿದರು.

ಕತ್ತಿ ಹೇಳಿಕೆಗೆ ವಿರೋಧ: ನಮ್ಮದು ಸುವರ್ಣ ಕರ್ನಾಟಕ. ಇದನ್ನು ಒಡೆಯಲು ಎಂದಿಗೂ ಬಿಡುವುದಿಲ್ಲ, ಇಬ್ಭಾಗ ಮಾಡಲು ಬಂದರೆ ಹೋರಾಟ ಮಾಡಬೇಕಾಗುತ್ತದೆ ಎಂದು ತಮ್ಮದೇ ಪಕ್ಷದ ಮಾಜಿ ಸಚಿವ ಉಮೇಶ್‍ಕತ್ತಿ ವಿರುದ್ಧ ಬೇಳೂರು ಗೋಪಾಲಕೃಷ್ಣ ಇದೇ ವೇಳೆ ತೀವ್ರ ಕಿಡಿಕಾರಿದರು. ಇಲ್ಲಿ ಯಾವುದೇ ಕತ್ತಿ ವರಸೆ ನಡೆಯುವುದಿಲ್ಲ. ಉಮೇಶ್‍ಕತ್ತಿಯವರ ಸಮಸ್ಯೆಗಳೇನಿದ್ದರೂ ಪಕ್ಷದಲ್ಲಿ ಹೇಳಲಿ, ಪರಿಹರಿಸೋಣ. ಅದನ್ನು ಬಿಟ್ಟು ರಾಜ್ಯವನ್ನು ಇಬ್ಭಾಗ ಮಾಡುವಂತೆ ಹೇಳಿಕೆ ನೀಡುವುದು ಸರಿಯಲ್ಲ. ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಮತ್ತು ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಗೋಪಾಲಕೃಷ್ಣ ಒತ್ತಾಯಿಸಿದರು.

Write A Comment