
ಬೆಳಗಾವಿ: ‘ಶಿಲ್ಪಗಳ ತಯಾರಿಕೆ, ದೇವಸ್ಥಾನ ನಿರ್ಮಾಣಕ್ಕಾಗಿ ತರಬೇತಿ ಅಗತ್ಯವಿದೆ. ಆದ್ದರಿಂದ ರಾಜ್ಯದಲ್ಲಿ ಶಿಲ್ಪಕಲಾ ಶಾಲೆ ಆರಂಭಿಸಬೇಕು’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಆಶ್ರಯದಲ್ಲಿ ನಗರದಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವಕರ್ಮ ಸಮಾಜದವರಿಗೆ ರಕ್ತಗತವಾಗಿ ಬಂದಿರುವ ಕಲೆಯನ್ನು ಉಳಿಸಿ, ಬೆಳೆಸುವ ಅಗತ್ಯವಿದೆ. ಹೀಗಾಗಿ ಅವರು ತಮ್ಮ ಮಕ್ಕಳಿಗೆ ಶಿಲ್ಪಕಲೆ ಬಗ್ಗೆ ತಿಳಿವಳಿಕೆ ನೀಡಬೇಕು. ಅದ್ಭುತವಾದ ಶಿಲ್ಪಗಳನ್ನು ತಯಾರಿಸುವ ಮೂಲಕ ಇಡೀ ಪ್ರಪಂಚವನ್ನೇ ಸುಂದರಗೊಳಿಸಿರುವ ಕೀರ್ತಿ ವಿಶ್ವಕರ್ಮ ಸಮಾಜಕ್ಕೆ ಸಲ್ಲುತ್ತದೆ. ಆದ್ದರಿಂದ ಮುಂದಿನ ಪೀಳಿಗೆಯಲ್ಲೂ ಈ ಕಲೆ ಜೀವಂತವಾಗಿ ಉಳಿಯಬೇಕು ಎಂಬ ಉದ್ದೇಶದಿಂದ ಶಿಲ್ಪಕಲಾ ಶಾಲೆ ತೆರೆಯುವ ಅಗತ್ಯವಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ‘ವಿಶ್ವಕರ್ಮ ಸಮಾಜದವರು ವಿಧ್ವಂಸಕ ಕೃತ್ಯ ಮಾಡುವವರಲ್ಲ, ದೇಶ ಕಟ್ಟುವ ಕೆಲಸ ಮಾಡುವವರು. ಕಾಂಗ್ರೆಸ್ ಪಕ್ಷವನ್ನು ಈ ಸಮಾಜ ಮೊದಲಿನಿಂದಲೂ ಬೆಂಬಲಿಸುತ್ತ ಬಂದಿದೆ. ಆದರೆ, ನಾವು ಈ ಸಮಾಜಕ್ಕೆ ಸೂಕ್ತವಾದ ಸ್ಥಾನಮಾನ ನೀಡಿಲ್ಲ. ಈಗ ಈ ಸಮಾಜದ ಅಭಿವೃದ್ಧಿಗೆ ಕ್ರಮ ತೆಗೆದುಕೊಂಡಿದ್ದು, ವಿಶ್ವಕರ್ಮ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಇದಕ್ಕಾಗಿ ₨30 ಕೋಟಿ ಅನುದಾನ ಒದಗಿಸಲಾಗಿದೆ. ರಾಜಕೀಯವಾಗಿಯೂ ಸಮಾಜಕ್ಕೆ ಸೂಕ್ತ ಸ್ಥಾನಮಾನ ಒದಗಿಸಲಾಗುವುದು’ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಳುಹಿಸಿದ್ದ ಸಂದೇಶವನ್ನು ಅವರು ಓದಿದರು. ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ‘ಯಾವುದೇ ಸಮಾಜ ಮುಂದೆ ಬರಲು ಒಗ್ಗಟ್ಟು ಅವಶ್ಯ. ಈ ನಿಟ್ಟಿನಲ್ಲಿ ವಿಶ್ವಕರ್ಮ ಸಮಾಜ ಒಗ್ಗಟ್ಟು ಪ್ರದರ್ಶಿಸಿದೆ. ಆದರೆ, ಈವರೆಗೆ ಸಮಾಜದ ಕೆ.ಪಿ.ನಂಜುಂಡಿ ಅವರನ್ನು ಗುರುತಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಅವರು ಬಿಜೆಪಿಗೆ ಬಂದರೆ ವಿಧಾನ ಪರಿಷತ್ ಸದಸ್ಯತ್ವ ನೀಡಲಾಗುವುದು’ ಎಂದು ನಂಜುಂಡಿ ಅವರಿಗೆ ಆಹ್ವಾನ ನೀಡಿದರು.
‘ರಾಜ್ಯದಲ್ಲಿ ಐದು ವರ್ಷಗಳ ಕಾಲ ಅಧಿಕಾರ ನಡೆಸಿದ ಸಂದರ್ಭದಲ್ಲಿ ನಂಜುಂಡಿ ಅವರ ಬಗ್ಗೆ ಬಿಜೆಪಿಗೆ ಗೊತ್ತಾಗಲಿಲ್ಲ. ಅಧಿಕಾರ ಕಳೆದುಕೊಂಡ ನಂತರ ಇಂಥ ಆಹ್ವಾನ ನೀಡುತ್ತಿದ್ದಾರೆ. ಇಂಥವರ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ ಅವರು ಕೋರೆ ಹೇಳಿಕೆಗೆ ತಿರುಗೇಟು ನೀಡಿದರು.
‘ವಿಶ್ವಕರ್ಮ ಸಮಾಜದವರಿಗೆ ಎಲ್ಲ ಕ್ಷೇತ್ರಗಳಲ್ಲೂ ಅವಕಾಶ ನೀಡಬೇಕು. ಗುಲಾಮಗಿರಿ ಸಾಕು, ಸಮಾನತೆ ಒದಗಿಸಬೇಕು. ನನಗೆ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ಆದರೆ, ಸಮಾಜದ ಅಭಿವೃದ್ಧಿಗೆ ನ್ಯಾಯ ಒದಗಿಸಬೇಕು. ವಿಶ್ವಕರ್ಮ ಜಯಂತಿಯಂದು ಸರ್ಕಾರಿ ರಜೆ ಘೋಷಣೆಯಾಗಬೇಕು. ಕಾಂಗ್ರೆಸ್ ಪಕ್ಷವು ನಮ್ಮ ಕೈ ಬಿಟ್ಟಿಲ್ಲ. ಆದರೆ, ಆ ಪಕ್ಷದ ನಾಯಕರು ನಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ’ ಎಂದು ಮಹಾಸಭಾದ ರಾಜ್ಯ ಅಧ್ಯಕ್ಷ ಕೆ.ಪಿ.ನಂಜುಂಡಿ ಆರೋಪಿಸಿದರು.
100 ಕೋಟಿ ಮೀಸಲಿಡಲು ಒತ್ತಾಯ
ಬೆಂಗಳೂರು: ‘ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಈ ಬಾರಿಯ ಮುಂಗಡಪತ್ರದಲ್ಲಿ ನೂರು ಕೋಟಿ ಹಣ ಮೀಸಲಿಡಬೇಕು’ ಎಂದು ರಾಜ್ಯ ವಿಶ್ವಕರ್ಮ ಮಹಾಮಂಡಲದ ಅಧ್ಯಕ್ಷ ಎಲ್.ನಾಗರಾಜಾಚಾರ್ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಲದ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಏರ್ಪಡಿಸಿದ್ದ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಶ್ವಕರ್ಮ ಸಮುದಾಯ ಅತ್ಯಂತ ಹಿಂದುಳಿದಿದ್ದು, ಸಮುದಾಯದ ಪಂಚ ಕುಲ ಕಸುಬು ಮಾಡುವವರಿಗೆ 50 ಸಾವಿರ ಸಾಲ ಸೌಲಭ್ಯ ನೀಡಬೇಕು. ವಿಶ್ವಕರ್ಮ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕು ಮತ್ತು ಸೆ. 17ರಂದು ಸರ್ಕಾರಿ ರಜೆ ಘೋಷಣೆ ಮಾಡಬೇಕು ಎಂದರು.‘ಕರ್ನಾಟಕ ವಿಶ್ವಕರ್ಮ ಸಮುದಾಯಗಳ ನಿಗಮ’ಕ್ಕೆ ಸಮುದಾಯದವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು. ನಿಗಮಕ್ಕೆ ಎಲ್ಲಾ ಜಿಲ್ಲೆಗಳಿಂದ ಸದಸ್ಯರನ್ನು ಆಯ್ಕೆ ಮಾಡಬೇಕು.
ಸಮುದಾಯವನ್ನು ಪ್ರವರ್ಗ 1ಕ್ಕೆ ಸೇರಿಸಿ ಶಿಕ್ಷಣ, ಉದ್ಯೋಗದಲ್ಲಿ ಶೇ 4 ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಪ್ರತಿ ತಾಲ್ಲೂಕಿನಲ್ಲಿ ವಿಶ್ವ ಕರ್ಮ ಸಮುದಾಯ ಭವನ, ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲು ಅಗತ್ಯ ಭೂಮಿ ನೀಡಬೇಕು ಎಂದು ಹೇಳಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಸಮುದಾಯವನ್ನು ಪ್ರವರ್ಗ 1ಕ್ಕೆ ಸೇರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.