ಕರ್ನಾಟಕ

ಉಮೇಶ್‌ ಕತ್ತಿಯ ಪ್ರತ್ಯೇಕ ರಾಜ್ಯ ಹೇಳಿಕೆಗೆ ಪಾಪು ಆಕ್ರೋಶ

Pinterest LinkedIn Tumblr

Patil Puttappa

ಧಾರವಾಡ: ‘ಕರ್ನಾಟಕದ ಏಕೀ­ಕರಣ­ಕ್ಕಾಗಿ ನಡೆದ ಹೋರಾಟ ಹಾಗೂ ಇತಿ­ಹಾಸದ ಕಲ್ಪನೆ ಇಲ್ಲದ ಉಮೇಶ್‌ ಕತ್ತಿ ಅಖಂಡ ಕರ್ನಾ­ಟಕ­ವನ್ನು ವಿಭಜಿಸಬೇಕು ಎಂಬ ಹೇಳಿಕೆ ನೀಡಿರುವುದು ಖಂಡ­ನಾರ್ಹ. ಅದಕ್ಕೆ ಮಹತ್ವ ನೀಡುವ ಅಗತ್ಯ­ವಿಲ್ಲ’ ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಬುಧವಾರ ಇಲ್ಲಿ ಹೇಳಿದರು.

‘ಅಖಂಡ ಕರ್ನಾಟಕ ವಿಭಜನೆ­ಯಾಗಬಾರದು ಹಾಗೂ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಮಧ್ಯವರ್ತಿ ಸ್ಥಳವಾಗಿರುವ ದಾವಣಗೆರೆಯನ್ನು ಎರಡನೇ ರಾಜಧಾನಿಯನ್ನಾಗಿ ಆಯ್ಕೆ ಮಾಡುವ ಅವಶ್ಯಕತೆ ಇದೆ. ಈ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಬೇಕು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಅವರನ್ನು ಆಗ್ರಹಿಸಿದರು.

‘1856ರಿಂದ ಕರ್ನಾಟಕ ಏಕೀಕರಣ­ದವರೆಗೆ ಹೋರಾಡಿದ ಮಹನೀಯರ ಪ್ರಯತ್ನ ಮತ್ತು ಇತಿಹಾಸ ಅರಿಯದ ಉಮೇಶ ಕತ್ತಿ ಅಂಥವರು ಮಾತ್ರ ಇಂಥ ಅಸಂಬದ್ಧ ಬೇಡಿಕೆ ಪ್ರಸ್ತಾಪಿಸಲು ಸಾಧ್ಯ. ಕರ್ನಾಟಕದ ಏಕೀಕರಣದ ನಂತರ ಹಳೇ ಮೈಸೂರು ಭಾಗ ಅಭಿವೃದ್ಧಿಗೊಂಡಷ್ಟು ಉತ್ತರ ಕರ್ನಾಟಕ ಆಗಿಲ್ಲ ಎಂಬ ಕೊರಗು ಈಗಲೂ ಇದೆ. ಆದರೆ ಅದಕ್ಕೆ ವಿಭಜನೆ ಪರಿಹಾರವಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ಮಂತ್ರಿಯಾಗಿದ್ದಾಗ ಉತ್ತರ ಕರ್ನಾಟಕದ ಬೇಡಿಕೆಗಳ ಕುರಿತ ದನಿ ಎತ್ತದ ಅವರು ಬೆಳಗಾವಿಗೆ ನೀಡಿರುವ ಕೊಡುಗೆಯಾದರೂ ಏನು? ಇಂಥ ಒಡೆಯುವ ಕೆಲಸದಿಂದಲೇ ಅವರು ಕತ್ತಿಯಾಗಿಯೇ ಉಳಿದರೇ ಹೊರತು, ಮನುಷ್ಯರಾಗಲಿಲ್ಲ. ಇವರ ಈ ಬೇಡಿಕೆಯನ್ನು ವಿದ್ಯಾವರ್ಧಕ ಸಂಘ ಎಂದೂ ಬೆಂಬಲಿಸದು’ ಎಂದು ಹರಿಹಾಯ್ದರು.

‘ದೇವೇಗೌಡರಿಗೆ ಮೋಸ ಮಾಡಿ ಬೇರೆ ಪಕ್ಷಕ್ಕೆ ಹೋದಂತೆ, ಕರ್ನಾಟಕ ಜನರಿಗೆ ಉಮೇಶ್‌ ಕತ್ತಿ ಮೋಸ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಆಗಬೇಕೆಂಬ ಕನಸನ್ನು ಅವರು ಬಿಡ­ಬೇಕು. ಕತ್ತೆಗಳು ಕೂಡಾ ಕನಸು ಕಾಣಬಹುದು. ಅದನ್ನು ತಡೆಯ­ಲಾಗದು. ಕತ್ತಿಯ ಕನಸು ಕನಸಾಗಿಯೇ ಉಳಿಯಲಿದೆ’ ಎಂದು ವ್ಯಂಗ್ಯ­ವಾಡಿದರು.

Write A Comment