ಕರಾವಳಿ

ವಿಧಾನಸಭಾ ಚುನಾವಣಾ ಹಿನ್ನೆಲೆ: ಉಡುಪಿ ಜಿಲ್ಲೆಯ ಇಬ್ಬರು ರೌಡಿ ಶೀಟರ್’ಗಳ ಗೂಂಡಾ ಕಾಯ್ದೆಯಡಿ ಬಂಧನ

Pinterest LinkedIn Tumblr

ಉಡುಪಿ: ಮುಂಬರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಇಬ್ಬರು ರೌಡಿ ಶೀಟರ್ ಗಳನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ.

ಬಂಧಿತರನ್ನು ಬೈಂದೂರು ನಂದನವನ ಗ್ರಾಮದ ರವಿ ಯಾನೆ ರವಿಚಂದ್ರ ಹಾಗೂ ಆತ್ರಾಡಿಯ ಸೈಫುದ್ದೀನ್ ಯಾನೆ ಸೈಫು ಎಂದು ಗುರುತಿಸಲಾಗಿದೆ.

ಬೈಂದೂರು ಠಾಣೆ ಹಾಗೂ ಹಿರಿಯಡ್ಕ ಠಾಣೆಯಲ್ಲಿ ರೌಡಿಶೀಟರ್ ಹೊಂದಿರುವ ರವಿಚಂದ್ರ, 1996ರಿಂದ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದು, ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಹಿರಿಯಡ್ಕ ಠಾಣೆಗಳಲ್ಲಿ ಅಪರಾಧ ಕೃತ್ಯ ಎಸಗಿರುವುದಲ್ಲದೇ ದಕ್ಷಿಣ ಕನ್ನಡ, ಕಾರವಾರ ಹಾಗೂ ಶಿವಮೊಗ್ಗ ಜಿಲ್ಲೆಯ ಠಾಣೆಗಳಲ್ಲಿ ಹಲ್ಲೆ, ದೊಂಬಿ, ಸುಲಿಗೆ, ಕೊಲೆಗೆ ಪ್ರಯತ್ನ, ಅಪಹರಣ, ಕೋಮು ಗಲಭೆ ಸಹಿತ 21 ಪ್ರಕರಣಗಳು ದಾಖಲಾಗಿವೆ. ಈತನು 65 ಮಂದಿ ಸಹಚರರ ಬಣವನ್ನು ಹೊಂದಿದ್ದಾನೆ.

ಹಿರಿಯಡ್ಕ ಹಾಗೂ ಉಡುಪಿ ನಗರ ಠಾಣೆಯಲ್ಲಿ ರೌಡಿಶೀಟರ್ ಹೊಂದಿರುವ ಸೈಫುದ್ದೀನ್, 1995ರಿಂದ ಅಪರಾಧ ಕೃತ್ಯ ಗಳನ್ನು ಎಸಗುತ್ತಿದ್ದು, ಉಡುಪಿ ಜಿಲ್ಲೆಯ ಉಡುಪಿ ನಗರ, ಹಿರಿಯಡ್ಕ, ಮಣಿಪಾಲ ಮತ್ತು ಕುಂದಾಪುರ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಬಲಧ್ಘೃಹಣ, ದೊಂಬಿ, ಹಲ್ಲೆ, ವಂಚನೆ ಸಹಿತ 19 ಪ್ರಕರಣಗಳು ದಾಖಲಾಗಿದೆ. ಈತನು 34 ಜನ ಸಹಚರರ ಬಣವನ್ನು ಹೊಂದಿದ್ದಾನೆ.

ಇವರು ತಮ್ಮ ಅಪರಾಧ ಕೃತ್ಯಗಳಿಂದ ಸಮಾಜದ ಸ್ವಾಸ್ಥ್ಯ ಕದಡುವ ವ್ಯಕ್ತಿ ಗಳಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸುವ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಯವರಿಗೆ ಸಲ್ಲಿಸಿದ ವರದಿಯ ಮೇರೆಗೆ ಜಿಲ್ಲಾಧಿಕಾರಿಯವರು ಇಬ್ಬರ ವಿರುದ್ಧ ಗೂಂಡಾ ಕಾಯ್ದೆಯಂತೆ ಕ್ರಮ ಜರುಗಿಸಿ ಬಂಧನ ಆದೇಶ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.

ರವಿಚಂದ್ರನನ್ನು ಕಲಬುರಗಿ ಕೇಂದ್ರ ಕಾರಾಗೃಹ ಹಾಗೂ ಸೈಫುದ್ದೀನ್ ಎನ್ನುವಾತನನ್ನು ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿ ಇಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.

Comments are closed.