ಕುಂದಾಪುರ: ವಾರದ ಹಿಂದೆ ಕುಂದಾಪುರ ನಗರದಲ್ಲಿನ ಚಿನ್ನದ ಅಂಗಡಿಯೊಂದಕ್ಕೆ ಚಿನ್ನ ಖರೀದಿಗೆಂದು ಗ್ರಾಹಕನ ಸೋಗಿನಲ್ಲಿ ಬಂದು 1 ಲಕ್ಷದ 25 ಸಾವಿರ ಮೌಲ್ಯದ 9 ಗ್ರಾಂ ಚಿನ್ನದ ಸರ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ಮೂಲದ ರಮೇಶ (42) ಬಂಧಿತ ಆರೋಪಿ. ಈತ ಕಳವುಗೈದ ಚಿನ್ನದ ಚೈನ್ ಮತ್ತು ಆತನ ವಶದಲ್ಲಿದ್ದ ರೂಪಾಯಿ 33 ಸಾವಿರ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಘಟನೆ ವಿವರ: ಕುಂದಾಪುರ ನಗರದಲ್ಲಿರುವ ಎಸ್‌ಪಿಜಿ ಗೋಲ್ಡ್ ಆಂಡ್ ಡೈಮೆಂಡ್ ಅಂಗಡಿಗೆ ಜ.27 ರಂದು ಸಂಜೆ ಸುಮಾರಿಗೆ 40 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಚಿನ್ನ ಖರೀದಿಯ ನೆಪದಲ್ಲಿ ಬಂದಿದ್ದು ಅಂಗಡಿಯ ಕೆಲಸದವರಿಂದ ಚಿನ್ನದ ಸರವನ್ನು ನೋಡಿ ಅವರ ಕಣ್ಣು ತಪ್ಪಿಸಿ ಸುಮಾರು 9 ಗ್ರಾಂನ ಚಿನ್ನದ ಸರವನ್ನು ಕಳವು ಮಾಡಿದ್ದ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಹೆಚ್.ಡಿ ಕುಲಕರ್ಣಿ ಮಾರ್ಗದರ್ಶನದಲ್ಲಿ ಕುಂದಾಪುರ ಪೊಲೀಸ್ ಠಾಣಾ ನಿರೀಕ್ಷಕ ಜಯರಾಮ್ ಡಿ. ಗೌಡ ನೇತೃತ್ವದಲ್ಲಿ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಪಿಎಸ್ಐ ನಂಜಾನಾಯ್ಕ್ ಎನ್., ತನಿಖಾ ಪಿಎಸ್ಐ ಪುಷ್ಪ, ಹಾಗೂ ಸಿಬ್ಬಂದಿಗಳಾದ ಸಂತೋಷ, ಮಹಾಬಲ ಶೆಟ್ಟಿಗಾರ, ಪ್ರೀನ್ಸ್, ಘನಶ್ಯಾಮ್, ಸಂತೋಷ ದೇವಾಡಿಗ, ಗೌತಮ, ಲೋಹಿತ್, ಚಂದ್ರಶೆಟ್ಟಿ ಮೊದಲಾದವರ ತಂಡ ಆರೋಪಿ ಪತ್ತೆ ಕಾರ್ಯ ನಡೆಸಿ ಬಂಧಿಸಿದ್ದಾರೆ.
Comments are closed.