ಕರಾವಳಿ

ಕುದ್ರೋಳಿ ಶ್ರೀ ಕ್ಷೇತ್ರ – ವೈಭವದ ಮಂಗಳೂರು ದಸರಾಕ್ಕೆ ಚಾಲನೆ : ಇಲ್ಲಿದೆ ಕಾರ್ಯಕ್ರಮಗಳ ವಿವರ

Pinterest LinkedIn Tumblr

ಮಂಗಳೂರು, ಸೆ.26: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ವೈಭವದ ಮಂಗಳೂರು ದಸರಾ-2022 ಉದ್ಘಾಟನೆ ಇಂದು (ಸೆ.26) ಬೆಳಗ್ಗೆ ನೆರವೇರಿತು. ಕೇಂದ್ರದ ಮಾಜಿ ಸಹಾಯಕ ವಿತ್ತ ಸಚಿವ, ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ.ಜನಾರ್ದನ ಪೂಜಾರಿ ಅವರು ದೀಪ ಬೆಳಗಿಸುವ ಮೂಲಕ ಈ ಬಾರಿಯ ಮಂಗಳೂರು ದಸರಾಕ್ಕೆ ಚಾಲನೆ ನೀಡಿದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಮಹೋತ್ಸವ ಇಂದಿನಿಂದ ಆರಂಭಗೊಂಡು ಅ.6ರವರೆಗೆ ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನಡೆಯಲಿದೆ

ಇಂದು ( ಸೋಮವಾರ) ಬೆಳಗ್ಗೆ 9.30ಕ್ಕೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ ಧರ್ನುಲಗ್ನ, ಕಲಶ ಪತ್ರಿಷ್ಠೆ ನಡೆಯಿತು. ಬಳಿಕ ಶ್ರೀ ಕ್ಷೇತ್ರದ ವರ್ಣರಂಜಿತ ಅದ್ದೂರಿ ದಸರಾ ದರ್ಬಾರ್ ಮಂಟಪದಲ್ಲಿ ಶ್ರೀ ಮಹಾಗಣಪತಿ ಮತ್ತು ನವದುರ್ಗೆಯರ ಹಾಗೂ ಶಾರದಾ ಪ್ರತಿಷ್ಠೆ ನೆರವೇರಿತು. ಆದಿಶಕ್ತಿ, ಮಹಾಗಣಪತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಿ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿಯರ ಪ್ರತಿಷ್ಠಾಪನೆ ನೆರವೇರಿತು. ಶ್ರೀಶಾರದೆಯ ಮೂರ್ತಿ ಎಂದಿನಂತೆ ಅತ್ಯಾಕರ್ಷಕವಾಗಿ ರೂಪುಗೊಂಡಿದ್ದು ಭಕ್ತರ ಮನ ಸೆಳೆಯುತ್ತಿದೆ.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್, ಉಳ್ಳಾಲ ಶಾಸಕ ಯು.ಟಿ.ಖಾದರ್, ಮುಲ್ಕಿ-ಮೂಡಬಿದ್ರೆ ಶಾಸಕ ಉಮಾತಾಥ್ ಕೋಟ್ಯಾನ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ‌.ಪಾಟೀಲ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ, ಮಹಾಲಿಂಗ ನಾಯ್ಕ್ , ಕಾಂಗ್ರೆಸ್ ನಾಯಕರಾದ ರಮಾನಾಥ ರೈ, ಮಿಥುನ್ ರೈ, ಅಭಯಚಂದ್ರ ಜೈನ್, ಹರೀಶ್ ಕುಮಾರ್ , ಶ್ರೀ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಉಪಾಧ್ಯಕ್ಷೆ ಊರ್ಮಿಳ ರಮೇಶ್, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್. ( ಅಡ್ವಕೇಟ್), ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಬಿ.ಜಿ. ಸುವರ್ಣ, ಟ್ರಸ್ಟಿಗಳಾದ ರವಿಶಂಕರ್ ಮಿಜಾರ್, ಕೆ. ಮಹೇಶ್ಚಂದ್ರ, ಎಂ. ಶೇಖರ್ ಪೂಜಾರಿ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಚಂಡಿಕಾಹೋಮ – ಮಹಾ ಅನ್ನಸಂತರ್ಪಣೆ :

ಸೆ. 27ರಂದು ಬೆಳಗ್ಗೆ ಗಂಟೆ 10.00ಕ್ಕೆ ದುರ್ಗಾಹೋಮ, ಸೆ. 28ರಂದು ಬೆಳಗ್ಗೆ ಗಂಟೆ 10.00ಕ್ಕೆ ಆರ್ಯ ದುರ್ಗಾಹೋಮ, ಸೆ. 29ರಂದು ಬೆಳಗ್ಗೆ ಗಂಟೆ 10.00ಕ್ಕೆ ಅಂಬಿಕಾ ದುರ್ಗಾ ಹೋಮ, ಸೆ.30ರಂದು ಬೆಳಗ್ಗೆ ಗಂಟೆ 10.00ಕ್ಕೆ ಭಗವತೀ ದುರ್ಗಾ ಹೋಮ (ಲಲಿತಾ ಪಂಚಮಿ), ಸಾಮೂಹಿಕ ಚಂಡಿಕಾ ಹೋಮ, ಅ. 1ರಂದು ಬೆಳಗ್ಗೆ ಗಂಟೆ 10.00ಕ್ಕೆ ಕುಮಾರಿ ದುರ್ಗಾ ಹೋಮ, ಅ. 2ರಂದು ಬೆಳಗ್ಗೆ 10.00ಕ್ಕೆ ಮಹಿಷಮರ್ದಿನಿ ದುರ್ಗಾ ಹೋಮ, ಅ.3ರಂದು ಬೆಳಗ್ಗೆ ಗಂಟೆ 10.00ಕ್ಕೆ ಚಂಡಿಕಾಹೋಮ, ಹಗಲೋತ್ಸವ, ದುರ್ಗಾಷ್ಟಮಿ, ಅ.4ರಂದು ಬೆಳಗ್ಗೆ ಗಂಟೆ 10.00ರಿಂದ ಸರಸ್ವತಿ ದುರ್ಗಾಹೋಮ, 11.30ಕ್ಕೆ ಶತಸೀಯಾಳಾಭಿಷೇಕ, ಶಿವಪೂಜೆ (ಮಹಾನವಮಿ), ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಭವ್ಯ ಶೋಭಾಯಾತ್ರೆ:

ಅ.5 ರಂದು ಬೆಳಗ್ಗೆ ಗಂಟೆ 10.00ರಿಂದ ವಾಗೀಶ್ವರಿ ದುರ್ಗಾಹೋಮ, 12.30ಕ್ಕೆ ಶಿವಪೂಜೆ, ಸಂಜೆ 4.00ರಿಂದ ಶ್ರೀ ಶಾರದ ಮಾತೆಯ ಶೋಭಾಯಾತ್ರೆ ನಡೆಯಲಿದೆ. ಅ.6ರಂದು ಪ್ರಾತಃಕಾಲ 4.00ರಿಂದ ಪೂಜೆ ಬಲಿ, ಮಂಟಪ ಬಲಿ, ಪ್ರಾತಃಕಾಲ ಮಂಟಪ ಪೂಜೆ ಬಳಿಕ ಶ್ರೀ ಶಾರದ ವಿಸರ್ಜನೆ, ಅವಭೃತ ಸ್ನಾನ. ರಾತ್ರಿ 7.00ರಿಂದ 8.00ರತನಕ ಭಜನಾ ಕಾರ್ಯಕ್ರಮ, 8.00ರಿಂದ ಗುರುಪೂಜೆ ನಡೆಯಲಿದೆ.

ಆದಿಶಕ್ತಿ, ಮಹಾಗಣಪತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಿ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿಯರ ಪ್ರತಿಷ್ಠಾಪನೆ.

Comments are closed.