ಕರಾವಳಿ

ಸ್ಥಳೀಯ ಯುವಕರು, ದಾನಿಗಳ ಸಹಕಾರದಿಂದ ಗೃಹ ನಿರ್ಮಾಣ – ನನಸಾಯಿತು ಅಪ್ಪಣ್ಣನ ಮನೆ ಕನಸು….

Pinterest LinkedIn Tumblr

ಮಂಗಳೂರು: ಸುಮಾರು 12 ವರ್ಷಗಳ ಹಿಂದೆ ಮಾಡಿನಿಂದ ಬಿದ್ದು ಆದ ಏಟಿನಿಂದ ಉಳಿ ಹಿಡಿಯಲಾರದೆ ಮರದ ಕೆತ್ತನೆಯ ಕೆಲಸ ಕೈ ಬಿಟ್ಟು ಜೀವನ ನಿರ್ವಹಣೆಗಾಗಿ ಮೂಡೆ ಮಾಡಿ ಮಾರಾಟ ಮಾಡಿ ಬರುವ ಅಲ್ಪ ಆದಾಯದಿಂದ ಬದುಕು ಕಟ್ಟಿಕೊಂಡಿದ್ದ ಪಂಜಿಮೊಗರು ವಿದ್ಯಾನಗರದ ಮಂಜುನಾಥ ಆಚಾರ್ಯ (ಅಪ್ಪಣ್ಣ) -ರತ್ನಾವತಿ ದಂಪತಿಯ ಮನೆ ನಿರ್ಮಾಣದ ಕನಸು ಈಡೇರಿದೆ.

ಮಂಜುನಾಥ ಆಚಾರ್ಯ -ರತ್ನಾವತಿ ದಂಪತಿ ಮೂಡೆ ಮಾಡಿ ತಿಂಗಳಿಗೆ ಆರೋ, ಏಳೋ ಸಾವಿರ ರೂ. ಸಂಪಾದನೆ ಮಾಡಿ ಅದರ ಅರ್ಧ ಭಾಗ ಬಾಡಿಗೆ ಮನೆಗೆ ಕೊಟ್ಟು ಉಳಿದ ಅಲ್ಪ ಹಣದಲ್ಲೇ ಜೀವನ ಸಾಗಿಸುತ್ತಿದ್ದರು.

ಇವೆಲ್ಲದರ ಮಧ್ಯೆ ಏಕೈಕ ಪುತ್ರಿ ದೀಕ್ಷಾ ವಿಶೇಷ ಚೇತನ ಎಂಬ ಕೊರಗು ಬೇರೆ! ಈ ನಡುವೆ ಎರಡು ವರ್ಷಗಳ ಹಿಂದೆ ಸ್ವಂತ ಮನೆ ನಿರ್ಮಿಸಬೇಕೆಂದು ಪಂಚಾಂಗ ಹಾಕಿ ಗೋಡೆ ತನಕ ಆದ ಕೆಲಸ ಮತ್ತೆ ಮುಂದುವರಿಯಲೇ ಇಲ್ಲ. ಅರ್ಧದಲ್ಲೇ ಭಾಕಿಯಾದ ಮನೆ ಯಾವಾಗ ಪೂರ್ತಿಯಾಗುವುದೋ ಎಂಬ ಹತಾಶ ಭಾವದಲ್ಲಿದ್ದಾಗಲೇ ರಮೇಶ್ ಶೆಟ್ಟಿ ವಿವೇಕನಗರ ನೇತೃತ್ವದಲ್ಲಿ ಸ್ಥಳೀಯ ಯುವಕರು ಅವರ ಮನೆ ಪೂರ್ಣಗೊಳಿಸುವ ಕನಸಿಗೆ ಜೀವ ತುಂಬಿದರು.

ಅರ್ಧದಲ್ಲೇ ನಿಂತ ಮನೆ ಪೂರ್ಣ ಮಾಡುವ ಬಗ್ಗೆ ವಿದ್ಯಾನಗರದ ಶ್ರೀ ಶಾರದೋತ್ಸವ ಸೇವಾ ಟ್ರಸ್ಟ್, ಶ್ರೀಕೃಷ್ಣ ಭಜನಾ ಮಂದಿರ ಹಾಗೂ ಹಿಂದು ಯುವಸೇನೆಯ ತಂಡ ರಮೇಶ್ ಶೆಟ್ಟಿ ಮತ್ತು ಪತ್ರಕರ್ತ ಮೋಹನದಾಸ್ ಮರಕಡ ನೇತೃತ್ವದಲ್ಲಿ ಯೋಜನೆ ರೂಪಿಸಿದರು.

ಅಪ್ಪಣ್ಣನ ಮನೆಯ ನೈಜ ಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿ ದಾನಿಗಳ ನೆರವು ಕೋರಲಾಯಿತು. ಬಂಟ್ವಾಳದ ಉದ್ಯಮಿಯೊಬ್ಬರು 100 ಚೀಲ ಸಿಮೆಂಟ್, ಗುರುಸೇವಾ ಪರಿಷತ್ -ಆನೆಗುಂದಿ ಸಂಸ್ಥಾನ ಮನೆಯ ಸ್ಲಾಬ್‌ಗೆ ಬೇಕಾದ ಕಬ್ಬಿಣಕ್ಕೆ ಆರ್ಥಿಕ ನೆರವು, ಬಿಜೆಪಿ ಮಂಗಳೂರು ಉತ್ತರ ಮಂಡಲ ಅಲ್ಪಸಂಖ್ಯಾತ ಮೋರ್ಚಾ ತಂಡ ಆರ್ಥಿಕ ನೆರವು ನೀಡಿತು. ಗುತ್ತಿಗೆದಾರ ಸಂದೀಪ್ ಪೂಜಾರಿ ನೇತೃತ್ವದಲ್ಲಿ ಕೆಲಸ ಆರಂಭವಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಟಿಟಿ ಚಾಲಕ ಮತ್ತು ಮಾಲೀಕ ಸಂಘದಿಂದ ಆರ್ಥಿಕ ನೆರವು ಬಂತು. ಸ್ಥಳೀಯ ದಾನಿಗಳು, ಮರಳು, ಜಲ್ಲಿ ಟೈಲ್ಸ್ ಇತ್ಯಾದಿ ಅಗತ್ಯ ವಸ್ತು ಪೂರೈಸಿದರು. ನಾಲ್ಕೇ ತಿಂಗಳಲ್ಲಿ ಸುಂದರ ಮನೆ ಎದ್ದು ನಿಂತಿತು.

ಜೂ. 22ರಂದು ಗೃಹಪ್ರವೇಶ :

ಅಪ್ಪಣ್ಣನ ಮನೆಯ ಗೃಹಪ್ರವೇಶ ಜೂನ್ 22ರಂದು ನಡೆಯಲಿದೆ.

ಉದ್ಯಮಿ ಗೋಪಾಲಕೃಷ್ಣ ಆಚಾರ್ಯ ಉದ್ಘಾಟಿಸಲಿದ್ದು, ಶಾಸಕ ಡಾ.ವೈ ಭರತ್ ಶೆಟ್ಟಿ, ಹಿರಿಯ ಪತ್ರಕರ್ತ ಸುರೇಂದ್ರ ಎಸ್.ವಾಗ್ಳೆ, ಕಾರ್ಪೊರೇಟರ್ ಅನಿಲ್ ಕುಮಾರ್, ಶಾರದೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಉಮೇಶ್ ಪೂಜಾರಿ, ಉದ್ಯಮಿ ಜಗದೀಶ್ ರಾಮ, ಬಿಜೆಪಿ ಮಂಗಳೂರು ಉತ್ತರ ಮಂಡಲ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಶಾನವಾಜ್, ವಿಶ್ವಕರ್ಮ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಹರೀಶ್ ಆಚಾರ್ಯ, ಶ್ರೀಕೃಷ್ಣ ಭಜನಾ ಮಂಡಳಿ ಅಧ್ಯಕ್ಷ ವಾಮನ ಪೂಜಾರಿ, ಉದ್ಯಮಿ ಉಮೇಶ್ ಮಲರಾಯಸಾನ ಮೊದಲಾದವರು ಭಾಗವಹಿಸುವರು. ಆರ್ಥಿಕ ನೆರವು ನೀಡಿದ ದಾನಿಗಳನ್ನು ಗೌರವಿಸಲಾಗುವುದು.

Comments are closed.