ಕರಾವಳಿ

ರಾಮಕೃಷ್ಣ ಮಠ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅನನ್ಯ ಸಾಧನೆಗಳ ಹೆಗ್ಗಳಿಕೆಗೆ ಪಾತ್ರ : ಕಾಗೇರಿ ಶ್ಲಾಘನೆ

Pinterest LinkedIn Tumblr

ಮಂಗಳೂರು: ಮಂಗಳೂರಿನ ಶ್ರೀ ರಾಮಕೃಷ್ಣ ಮಠ ಜೂ. 3ರಂದು 75 ಸಂವತ್ಸರಗಳನ್ನು ಪೂರ್ಣಗೊಳಿಸಿದ್ದು,  ಜೂ.3 ಮತ್ತು 4 ರಂದು ನಗರದಲ್ಲಿರುವ ರಾಮಕೃಷ್ಣ ಮಠದ ಸಭಾಭವನದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಎರಡು ದಿನಗಳ ಕಾಲ ನಡೆದ ಅಮೃತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ನಮ್ಮ ಮುಂದೆ ಅನೇಕ ಸವಾಲುಗಳಿವೆ. ಇದನ್ನು ಪರಿಹರಿಸಿಕೊಂಡು ಮೌಲ್ಯಗಳಿಂದ ಕೂಡಿದ ಸತ್‌ಸಮಾಜ ನಿರ್ಮಾಣ ಗುರಿಯೊಂದಿಗೆ ನಾವೆ ಲ್ಲರೂ ಮುನ್ನಡೆಯಬೇಕು ಎಂದು ಕರೆ ಕೊಟ್ಟರು.

ಸೃಷ್ಟಿ ಮತ್ತು ಮಾನವನಲ್ಲಿ ಭಗವಂತನನ್ನು ಕಂಡ, ಭಾರತದ ಆಧ್ಯಾತ್ಮಿಕ ಮತ್ತು ಸನಾತನ ಸಂಸ್ಕೃತಿಯ ಹಿರಿಮೆಯನ್ನು ಜಗತ್ತಿಗೆ ಸಾರಿದ ಸ್ವಾಮಿ ವಿವೇಕಾನಂದರ ಸಂದೇಶಗಳ ಅನುಷ್ಠಾನದಿಂದ ಭಾರತ ಮತ್ತೆ ವಿಶ್ವಗುರು ಸ್ಥಾನಕ್ಕೇರುವ ಗುರಿ ಸಾಕಾರಗೊಳ್ಳಲಿದೆ ಎಂದು ಅವರು ಹೇಳಿದರು.

ಮಂಗಳೂರು ರಾಮಕೃಷ್ಣ ಮಠ ಆಧ್ಯಾತ್ಮಿಕತೆಯ ಉದ್ದೀಪನದೊಂದಿಗೆ ಸ್ವತ್ಛ ಭಾರತ್‌, ಶೈಕ್ಷಣಿಕ, ಯುವಜಾಗೃತಿ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನನ್ಯ ಸಾಧನೆಗಳ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಕಾಗೇರಿ ಶ್ಲಾಘಿಸಿ ಅಭಿನಂದಿಸಿದರು.

ಪಶ್ಚಿಮ ಬಂಗಾಲ ಬೇಲೂರು ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ ಉಪಾಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹಾರಾಜ್‌ ಅವರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಜರಗಿತು. ಬೇಲೂರು ಮಠದ ವಿಶ್ವಸ್ತರಾದ ಸ್ವಾಮಿ ಮುಕ್ತಿದಾನಂದಜಿ ಮಾತನಾಡಿ, ಮಂಗಳೂರು ರಾಮಕೃಷ್ಣ ಮಠ ಆಧ್ಯಾತ್ಮಿಕತೆ ಜತೆಗೆ ಜನಸೇವೆಯ ಮೂಲಕ ಸಾರ್ಥಕತೆಯೊಂದಿಗೆ ಮುನ್ನಡೆಯುತ್ತಾ ಬಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಸ್ವಾಮಿ ಜಿತಕಾಮಾನಂದಜಿ ಅವರು ಮಾತನಾಡಿ ಎಲ್ಲರ ಸಹಕಾರದೊಂದಿಗೆ ಎರಡು ದಿನಗಳ ಅಮೃತ ಮಹೋತ್ಸವ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ. ಸ್ವಾಮಿ ವೀರೇಶ್ವರಾನಂದ ಸಾಧು ನಿವಾಸ ಅಮೃತ ಸದನ ಹಾಗೂ ಶ್ರೀಮಠದ ನೂತನ ಮಹಾದ್ವಾರ ಅಮೃತ ಪಥ ಲೋಕಾರ್ಪಣೆಗೊಂಡಿದೆ ಹಾಗೂ ವಿವೇಕಾನಂದ ತರಬೇತಿ ಕೇಂದ್ರದ ಕಟ್ಟಡ ಅಮೃತ ಭವನಕ್ಕೆ ಭೂಮಿಪೂಜೆ ನೆರವೇರಿದೆ. ಅರ್ಥಪೂರ್ಣ ಗೋಷ್ಠಿಗಳು ನಡೆದಿವೆ ಎಂದು ಹೇಳಿದರು.

ಶಾಸಕ ವೇದವ್ಯಾಸ ಕಾಮತ್‌, ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಜಿ.ಪಂ. ಸಿಇಒ ಡಾ| ಕುಮಾರ್‌, ಮೇಯರ್‌ ಪ್ರೇಮಾನಂದ ಶೆಟ್ಟಿ ಮೊದಲಾದವರು ಮಾತನಾಡಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಸ್ವಾಗತಿಸಿ ಪ್ರಸ್ತಾವನೆಗೈದರು. ಚೆನ್ನೈಯ ಮಹಾವೇದಾಂತ ಸ್ವಾಮಿ ಯತಿಗಳ ಪರವಾಗಿ ತುಮಕೂರಿನ ಡಾ| ಚಂದ್ರಶೇಖರ್‌ ಅವರು ಪ್ರತಿನಿಧಿಗಳ ಪರವಾಗಿ ಹಾಗೂ ವಿದ್ಯಾ ಶೆಣೈ ಅವರು ಸ್ವಯಂಸೇವಕರ ಪರವಾಗಿ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸ್ವಾಮಿ ಏಕಗಮ್ಯಾನಂದಜಿ ಅವರು ಉಪಸ್ಥಿತರಿದ್ದರು.

Comments are closed.