ಕುಂದಾಪುರ: ಸೇವೆಗೆ ಇನ್ನೊಂದು ಹೆಸರೇ ಸಹಕಾರಿ ಕ್ಷೇತ್ರ. ನಗುಮೊಗದ ಸೇವೆಯಿಂದಲೇ ನಾವು ಗ್ರಾಹಕರ ವಿಶ್ವಾಸವನ್ನು ಗಳಿಸಿದ್ದೇವೆ. ಜನರು ನಮ್ಮ ಬಳಿಗೆ ಬಂದು ಅವರ ಸಮಯ ವ್ಯರ್ಥ ಮಾಡಿಸದೆ ಜನರಿದ್ದಲ್ಲಿಗೆ ನಾವು ಹೋಗಿ ಸೇವೆ ಕೊಡಬೇಕು ಎನ್ನುವುದು ನಮ್ಮ ಧ್ಯೇಯ. ಈ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳಲ್ಲಿ ನೂರ ಐವತ್ತು ಶಾಖೆಗಳನ್ನು ತೆರೆಯುವ ಗುರಿ ಇದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಮ್.ಎನ್ ರಾಜೇಂದ್ರ ಕುಮಾರ್ ಹೇಳಿದರು.

ಅವರು ಕುಂದಾಪುರದ ಬಸ್ರೂರು ಕ್ರಾಸ್‌ನ ವಡೇರಹೋಬಳಿಯ ಪಿ.ವಿ.ಎಸ್ ಕಾಂಪ್ಲೆಕ್ಸ್ ಗೆ ಮಂಗಳವಾರ ಸ್ಥಳಾಂತರಗೊಂಡ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನ ವಡೇರ ಹೋಬಳಿ ಶಾಖೆಯೆ ಸ್ಥಳಾಂತರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಂದು ಸಂಸ್ಥೆಯನ್ನು ಹುಟ್ಟು ಹಾಕುವುದು ಅತ್ಯಂತ ಸುಲಭ. ಆದರೆ ಅದನ್ನು ನಡೆಸುವುದು ಕಷ್ಟ. 24 ವರ್ಷಗಳ ಹಿಂದೆ ವಡೇರಹೋಬಳಿಯಲ್ಲಿ ಒಂದುಕಾಲು ಕೋಟಿ ಠೇವಣಿ ಹಾಗೂ ಮೂವತ್ತು ಲಕ್ಷ ಸಾಲದೊಂದಿಗೆ ಪ್ರಾರಂಭಗೊಂಡ ಈ ಶಾಖೆ ಇಂದು ಮೂವತ್ತೈದು ಕೋಟಿಯಷ್ಟು ಠೇವಣಿಯಾಗಿ ಪರಿವರ್ತನೆಗೊಂಡಿದೆ. ಈ ಎಲ್ಲಾ ಬೆಳವಣಿಗೆ ಕೇವಲ ಆಡಳಿತ ಮಂಡಳಿಯ ಅಧ್ಯಕ್ಷರಿಂದ ಮಾತ್ರ ಸಾಧ್ಯವಾಗುವುದಿಲ್ಲ. ಎಲ್ಲಾ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು, ಆಡಳಿತ ಮಂಡಳಿಯ ಸದಸ್ಯರು, ಅಧಿಕಾರಿ ವರ್ಗ, ಬ್ಯಾಂಕ್ ಸಿಬ್ಬಂದಿಗಳು, ನವೋದಯ ಗುಂಪಿನ ಸದಸ್ಯರ ಸಹಕಾರದಿಂದಾಗಿ ಈ ಬೆಳವಣಿಗೆ ಸಾಧ್ಯವಾಗಿದೆ. 26 ವರ್ಷಗಳ ಕಾಲ ಕೃಷಿ ಸಾಲವನ್ನು ದೇಶದಲ್ಲೇ ನೂರಕ್ಕೆ ನೂರರಷ್ಟು ಮರುಪಾವತಿ ಮಾಡಿದ ಬ್ಯಾಂಕ್ ಇದ್ದರೆ ಅದು ಜಿಲ್ಲಾ ಸಹಕಾರಿ ಬ್ಯಾಂಕ್ ಮಾತ್ರ ಎಂದರು.
ಅವಿಭಜಿತ ದ.ಕ ಜಿಲ್ಲೆಯಲ್ಲಿ ರೈತರಿಗೆ ಸಾಲ ಹಾಗೂ ಆರ್ಥಿಕ ಸೌಲಭ್ಯ ಸಿಕ್ಕಿಲ್ಲ ಎಂದು ರೈತರು ಆತ್ಮಹತ್ಯೆ ಮಾಡಿಕೊಂಡ ಒಂದೇ ಒಂದು ಉದಾಹರಣೆ ಇಲ್ಲ. ಪ್ರಾಥಮಿಕ ಪತ್ತಿನ ಸಹಕಾರಿ ಸಂಘದವರು ರೈತಾಪಿವರ್ಗ ಮಾತ್ರವಲ್ಲದೇ ಎಲ್ಲರಿಗೂ ಬೇಕಾಗುವಂತಹ ವ್ಯವಸ್ಥೆಯನ್ನು ಅತ್ಯಲ್ಪ ಸಮಯದಲ್ಲಿ ಮಾಡಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಎಲ್ಲ ಸಹಕಾರಿ ಸಂಘಗಳಿಗೆ ಸಕಾಲದಲ್ಲಿ ನೆರವಾಗುತ್ತಿದ್ದು 125 ಶಾಖೆಗಳ ಲೋಕಾರ್ಪಣೆ ಶೀಘ್ರ ನಡೆಯಲಿ ಎಂದರು.
ಸಾಂಕೇತಿಕವಾಗಿ 3 ಮಂದಿಗೆ ವಾಹನ ಸಾಲ, 2 ಗುಂಪುಗಳಿಗೆ ಚೈತನ್ಯ ವಿಮೆ, 23 ಗುಂಪುಗಳಿಗೆ 1.23 ಕೋ.ರೂ. ಸಾಲ ವಿತರಿಸಲಾಯಿತು. 10 ನವೋದಯ ಸಂಘ ಉದ್ಘಾಟಿಸಲಾಯಿತು.
ಡಿಸಿಸಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಎಸ್.ವಿ. ಅರುಣ್ ಕುಮಾರ್, ಕಟ್ಟಡದ ಮಾಲಕ ಎನ್. ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಕಟ್ಟಡ ಮಾಲಕರನ್ನು ಹಾಗೂ ಶಾಖಾ ವ್ಯವಸ್ಥಾಪಕಿ ಚಂಪಾವತಿ ಅವರನ್ನು ಸನ್ಮಾನಿಸಲಾಯಿತು.
ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಎಂ. ಮಹೇಶ್ ಹೆಗ್ಡೆ ಸ್ವಾಗತಿಸಿ, ರಾಜು ಪೂಜಾರಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರ್ವಹಿಸಿದರು.
Comments are closed.