ಕರಾವಳಿ

ವಂಡ್ಸೆಯಲ್ಲಿ 7 ಕೋಟಿ ವೆಚ್ಚದ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ‌ ಕಾಯಕಲ್ಪ: ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ

Pinterest LinkedIn Tumblr

ಕುಂದಾಪುರ: ಬಹಳಷ್ಟು ವರ್ಷಗಳಿಂದ ಈಡೇರದ ಜನರ ಬೇಡಿಕೆಗಳನ್ನು ನಮ್ಮ ಸರ್ಕಾರ ಮತ್ತು ಜನಸ್ಪಂದನೆಯ ಆಡಳಿತ ಅವಧಿಯಲ್ಲಿ ಈಡೇರಿಸುತ್ತಿರುವುದು ನನಗೆ ಸಂತೃಪ್ತಿ ಉಂಟುಮಾಡಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು.

ವಂಡ್ಸೆಯಲ್ಲಿ 7 ಕೋಟಿ ವೆಚ್ಚದ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ‌ ಪೂಜೆ ನೆರವೇರಿಸಿ ಮಾತನಾಡಿದ ಅವರು, ವಂಡ್ಸೆ, ಬಾಳಿಕೆರೆ ಭಾಗದ ಜನರು ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದವರು. ಬಾವಿಯಲ್ಲಿ ಉಪ್ಪು ನೀರು, ಬೇಸಿಗೆಯಲ್ಲಿ ನೀರಿನ ಕೊರತೆ ಇಂತಹ ಅನೇಕ ಸಮಸ್ಯೆಗಳನ್ನು ಎದುರಿಸಿದ ಈ ಭಾಗದ ಜನರ ಅತ್ಯಂತ ಬಹುಬೇಡಿಕೆಯ ಕಿಂಡಿಅಣೆಕಟ್ಟು ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ. ಸುಮಾರು ಏಳುವರೆ ಕೋಟಿ ರೂಪಾಯಿ ಅನುದಾನದಲ್ಲಿ ಕಿಂಡಿಅಣೆಕಟ್ಟು ನಿರ್ಮಾಣಗೊಳ್ಳಲಿದೆ ಎಂದರು.

ಅತ್ರಾಡಿ ಸಮೀಪ ನಿರ್ಮಾಣಗೊಳ್ಳುವ‌ ಈ ವೆಂಟೆಡ್ ಡ್ಯಾಂ ಕಮ್ ಬ್ರಿಡ್ಜ್ ಆಗುವ ಕಾರಣಕ್ಕೆ ವ್ಯಾಪಾರ ವಹಿವಾಟುಗಳಿಗೆ ಸಂಪರ್ಕ ಕಲ್ಪಿಸಲು ಸಹಾಯಕ ಆಗುತ್ತದೆ. ಇಲ್ಲಿ ನೀರು ಶೇಖರಣೆ ಆಗುವುದರಿಂದ ಕುಡಿಯುವ ನೀರಿನ ಅಂತರ್ಜಲ ಹೆಚ್ಚಾಗಿ, ಈ ಭಾಗದವರಿಗೆ ಸಿಹಿ ನೀರು ದೊರಕುತ್ತದೆ. ಇದು ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗುತ್ತದೆ‌. ಅಧಿಕಾರ ಇರುವುದು ಜನರ ಸಂಕಷ್ಟಗಳಿಗೆ ಸ್ಪಂದಿಸುವುದಕ್ಕಾಗಿ ಎಂದು ನಂಬಿಕೊಂಡು ಬಂದವನು ನಾನು. ಜನರ ಆಶೀರ್ವಾದದಿಂದ ದೊರೆತ ಅಧಿಕಾರದ ಮೂಲಕ ಸಮಸ್ತ ಬೈಂದೂರಿನ ಅಭಿವೃದ್ಧಿಯೇ ನನ್ನ ಗುರಿ ಎಂದು ಶಾಸಕ ಬಿ.ಎಮ್. ಸುಕುಮಾರ ಶೆಟ್ಟಿ ಹೇಳಿದ್ದಾರೆ.

Comments are closed.