ಕರಾವಳಿ

ಕಸ್ತೂರಿ ರಂಗನ್ ವರದಿ ಮಾರ್ಪಾಡುಗಳಿಸಲು ಕೇಂದ್ರ ಸಚಿವ ಭೂಪೇಂದ್ರ ಯಾದವ್’ರಿಗೆ ಮನವಿ

Pinterest LinkedIn Tumblr

ಕುಂದಾಪುರ: ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ; ರಾಘವೇಂದ್ರ ರವರು ಶನಿವಾರದಂದು ನವದೆಹಲಿಯಲ್ಲಿ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರಾದ ಭೂಪೇಂದ್ರ ಯಾದವ್ ರವರನ್ನು ಭೇಟಿ ಮಾಡಿ ಕಸ್ತೂರಿ ರಂಗನ್ ವರದಿಯ ಅನುಷ್ಠಾನದಿಂದ ಆಗುವ ಸಮಸ್ಯೆಗಳ ಬಗ್ಗೆ ಹಾಗೂ ಈ ಕೆಳಗಿನಂತೆ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸುವಂತೆ ಕೋರಿ ಮನವಿ ಸಲ್ಲಿಸಿದರು.

•ಕಸ್ತೂರಿ ರಂಗನ್ ವರದಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಪ್ರಸ್ತಾಪಿಸಲಾದ ಪರಿಸರ ಸೂಕ್ಷ್ಮ ಪ್ರದೇಶ ಅಡಿಯಲ್ಲಿ 1543 ಗ್ರಾಮಗಳು ಬರುತ್ತವೆ. ಅದರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂದಾಜು 500 ಗ್ರಾಮಗಳು ಬರುತ್ತವೆ.

•ಪಶ್ಚಿಮಘಟ್ಟದ ಕಾಡಿನ ಗ್ರಾಮಗಳಲ್ಲಿ ಹಾಗೂ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರು ಪ್ರಕೃತಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಮನೋಭಾವ ಹೊಂದಿ ಸಂರಕ್ಷಿಸುತ್ತಿರುವ ಕಾರಣದಿಂದಲೇ ಸುಮಾರು 60% ಭೂ ಪ್ರದೇಶವು ಸಮೃದ್ಧ ಅರಣ್ಯವಾಗಿದೆ.

•ಆದ್ದರಿಂದ ವರದಿಯಲ್ಲಿ ಇರುವಂತೆ ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿರುವ ಗ್ರಾಮಗಳನ್ನು ಹೊರತುಪಡೆಸಿ, ಸಂಪೂರ್ಣ ಅರಣ್ಯ ಪ್ರದೇಶ ಮತ್ತು ಅರಣ್ಯ ಸಂರಕ್ಷಿತ ಪ್ರದೇಶಗಳಲ್ಲಿ ಮಾತ್ರ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಬೇಕು ಎಂದು ಕೋರಿದರು.

•ವರದಿಯಂತೆ, ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಲ್ಲಿ 5 ರಿಂದ 10 ಕಿ.ಮೀ.ವರೆಗಿನ ಪ್ರದೇಶವನ್ನು ಬಫರ್ ಜೋನ್ ಎಂಬುದಾಗಿ ಘೋಷಿಸುವುದರಿಂದ, ಜನಸಾಮಾನ್ಯರಿಗೆ ತೊಂದರೆಯಾಗುವುದಷ್ಟೇ ಅಲ್ಲದೇ, ರಾಜ್ಯ ಸರ್ಕಾರದ ವತಿಯಿಂದ ಈ ಭೂ ಪ್ರದೇಶದಲ್ಲಿ ಯಾವುದೇ ರೀತಿಯ ಔದ್ಯೋಗಿಕ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಬಫರ್ ಜೋನ್ ನ್ನು ಸಂಪೂರ್ಣವಾಗಿ ಈ ವರದಿಯ ಪ್ರಸ್ತಾವನೆಯಿಂದ ಕೈಬಿಡಬೇಕು.

•ಜನರಿಂದ ತೀವ್ರ ವಿರೋದ ವ್ಯಕ್ತವಾಗಿದ್ದರಿಂದ ಕರ್ನಾಟಕ ರಾಜ್ಯ ಸಚಿವ ಸಂಪುಟವು ಕಸ್ತೂರಿ ರಂಗನ್ ವರದಿಯ ಅನುಷ್ಠಾನವನ್ನು ತಿರಸ್ಕರಿಸಿದೆ.

•ಕರ್ನಾಟಕ ರಾಜ್ಯ ಸರ್ಕಾರವು ವಿಭಿನ್ನ ನಿಲುವು ವ್ಯಕ್ತಪಡಿಸಿರುವುದರಿಂದ, ಗ್ರಾಮಗಳಲ್ಲಿ ಪರಿಸ್ಥಿತಿ ಅಧ್ಯಯನ ಮಾಡಲು, ಪ್ರತೀ ಗ್ರಾಮಗಳ ಜನರಿಂದ ದೂರುಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳನ್ನೊಳಗೊಂಡ ಟಾಸ್ಕ್‌ ಪೋರ್ಸ್‌ ಅಥವಾ ಕಾರ್ಯ ಪಡೆ ರಚಿಸಲು ಕೇಂದ್ರ ಸಚಿವರಲ್ಲಿ ವಿನಂತಿಸಿದರು.

•ತಮ್ಮ ಸಲಹೆಗಳನ್ನು ಕಸ್ತೂರಿ ರಂಗನ್ ರವರ ಕರಡು ವರದಿಯಲ್ಲಿ ಅಳವಡಿಸಿಕೊಂಡು, ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕೆಂದು ಕೋರಿದರು.

ಕರ್ನಾಟಕ ಸರ್ಕಾರದ ಅರಣ್ಯ ಸಚಿವರಾದ ಆನಂದ್‌ ಸಿಂಗ್‌ ಹಾಗೂ ಗೃಹ ಸಚಿವರಾದ ಅರಗ ಜ್ಞಾನೇಂದ್ರ ರವರು, ಸಾಗರ ವಿಧಾನ ಸಭಾ ಸದಸ್ಯರಾದ ಹರತಾಳು ಹಾಲಪ್ಪರವರು ಸಂಸದರ ನಿಯೋಗದಲ್ಲಿದ್ದರು.

ಮನವಿಯನ್ನು ಸ್ವೀಕರಿಸಿದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರಾದ ಭೂಪೇಂದ್ರ ಯಾದವ್ ರವರು ಈ ಬಗ್ಗೆ ಸೂಕ್ತ ನಿರ್ಣಯವನ್ನು ಕೈಗೊಳ್ಳುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.

ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವರಾದ ಭೂಪೇಂದ್ರ ಯಾದವ್ ರವರನ್ನು ಭೇಟಿ ಮಾಡಿ ಕಸ್ತೂರಿ ರಂಗನ್ ವರದಿಯ ಅನುಷ್ಠಾನದಿಂದ ಆಗುವ ಸಮಸ್ಯೆಗಳ ಹಾಗೂ ಮಾರ್ಪಾಡಿನ ಬಗ್ಗೆ ಚರ್ಚಿಸಲಾಯಿತು
– ಸಂಸದ ಶ್ರೀ ಬಿ.ವೈ. ರಾಘವೇಂದ್ರ.

Comments are closed.