ಕರಾವಳಿ

ವಿಧಾನ ಪರಿಷತ್ ಚುನಾವಣೆ – ದ.ಕ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ನಾಮಪತ್ರ ಸಲ್ಲಿಕೆ

Pinterest LinkedIn Tumblr

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನೊಳಗೊಂಡ ಸ್ಥಳೀಯಾಡಳಿತ ಸಂಸ್ಥೆ ಚುನಾವಣಾ ಕ್ಷೇತ್ರದಿಂದ ವಿಧಾನಪರಿಷತ್‌ನ ಎರಡು ಸ್ಥಾನಗಳಿಗೆ ಡಿ. 10ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೆಪಿಸಿಸಿ ಮಾಜಿ ಉಪಾಧ್ಯಕ್ಷ, ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಆಯ್ಕೆಯಾಗಿದ್ದು ನ.23 ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.  ದ.ಕ ಜಿಲ್ಲಾಧಿಕಾರಿ ಹಾಗೂ ಪ್ರಸ್ತುತ ಚುನಾವಣಾಧಿಕಾರಿಯಾಗಿರುವ ಡಾ. ರಾಜೇಂದ್ರ ಕೆ.ವಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭ ಮಾಜಿ ಸಚಿವ ರಮಾನಾಥ ರೈ, ಶಾಸಕ ಯು.ಟಿ ಖಾದರ್, ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಉಡುಪಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ  ಅಶೋಕ್ ಕೊಡವೂರು, ಮುಖಂಡರಾದ ಮಿಥುನ್ ರೈ, ಅಭಯಚಂದ್ರ ಜೈನ್,  ಶಕುಂತಳಾ ಶೆಟ್ಟಿ, ಬೈಂದೂರು ಕಾಂಗ್ರೆಸ್ ಪ್ರಮುಖರಾದ ಎಸ್.ರಾಜು ಪೂಜಾರಿ, ಮದನ್ ಕುಮಾರ್, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ರಘುರಾಮ್ ಶೆಟ್ಟಿ, ಪ್ರಕಾಶ್ವಂದ್ರ ಶೆಟ್ಟಿ ಖಂಬದಕೊಣೆ, ಉದಯ ಕುಮಾರ್ ಶೆಟ್ಟಿ, ಪ್ರಸ್ನನ್ ಕುಮಾರ್ ಶೆಟ್ಟಿ, ಮೋಹನ್ ಪೂಜಾರಿ, ನರಸಿಂಹ ದೇವಾಡಿಗ,  ಶೇಖರ್ ಪೂಜಾರಿ ಮೊದಲಾದವರಿದ್ದರು.

ಮಂಗಳೂರಿನ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ರಾಗಿರುವ ಭಂಡಾರಿ ಅವರು ಎಂಜಿನಿಯರಿಂಗ್‌ ಪದವೀಧರಾಗಿದ್ದು ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಹಾಗೂ ಪಂಚಾಯತ್‌ರಾಜ್‌ ವ್ಯವಸ್ಥೆಯ ಬಗ್ಗೆ ಮಂಡಿಸಿರುವ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಈ ಹಿಂದೆ 2014ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚಿಕ್ಕಮಗಳೂರು ಜಿಲ್ಲಾ ಎನ್‌ಎಸ್‌ಯುಐ ಅಧ್ಯಕ್ಷರಾಗಿ, ಯುವಕಾಂಗ್ರೆಸ್‌ ಅಖೀಲ ಭಾರತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

Comments are closed.