ಕರಾವಳಿ

ಉಡುಪಿಯಲ್ಲಿ ಕದ್ದ ಆಭರಣಗಳನ್ನು ಹೂತಿಟ್ಟ ಖತರ್ನಾಕ್ ಕಳ್ಳನ ಬಂಧನ; 3.6 ಲಕ್ಷ ಮೌಲ್ಯದ ಚಿನ್ನಾಭರಣ ವಶ

Pinterest LinkedIn Tumblr

ಉಡುಪಿ: ಗುಂಡಿಬೈಲ್ ಬಳಿ ಇತ್ತೀಚೆಗೆ ನಡೆದ ಕಳ್ಳತನದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬನನ್ನು ಬೆಳ್ಳಂಪಳ್ಳಿಯಲ್ಲಿ ಬಂಧಿಸಲಾಗಿದೆ.

ಗುಂಡಿಬೈಲ್ ಸಮೀಪದ ಬಾಬು ಆಚಾರ್ಯ ಎಂಬುವವರಿಗೆ ಸೇರಿದ ಹಳೆಯ ಮನೆಯ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಅಲ್ಮೇರಾದಲ್ಲಿ ಸಿಕ್ಕ ಕೀಲಿಯಿಂದ ಲಾಕರ್ ತೆಗೆದು 3.6 ಲಕ್ಷ ಮೌಲ್ಯದ 90 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಜೊತೆಗೆ ಪೂಜಾ ಕೊಠಡಿಯಲ್ಲಿದ್ದ ಕಾಣಿಕೆ ಹುಂಡಿಯಲ್ಲಿದ್ದ 10 ಸಾವಿರ ಹಾಗೂ 400 ರೂಪಾಯಿ ಮೌಲ್ಯದ ಬೆಳ್ಳಿಯ ವಸ್ತುಗಳು ಕಳ್ಳತನವಾಗಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ಇಲ್ಲಿನ ನಗರ ಠಾಣೆಯ ಸಿಬ್ಬಂದಿ, ಕುಕ್ಕಿಕಟ್ಟೆ ನಿವಾಸಿ ಸುಕೇಶ್‌ ನಾಯ್ಕ್‌ (34) ಎಂಬಾತನನ್ನು ವೈನ್‌ ಶಾಪ್‌ ಬಳಿ ಇದ್ದಾಗ ಘಟನಾ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಬಂಧಿಸಿದ್ದಾರೆ.

ಬೆಳ್ಳಂಪಲ್ಲಿಯಲ್ಲಿ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಗುಂಡಿಬೈಲ್‌ನ ಪಂಚಧೂಮಾವತಿ ದೇವಸ್ಥಾನದ ಬಳಿಯ ಶ್ರೀಕರ್‌ ಕಾಮತ್‌ ಎಂಬುವರಿಗೆ ಸೇರಿದ ಜಮೀನಿನಲ್ಲಿ ಮಣ್ಣಿನಡಿ ಬಚ್ಚಿಟ್ಟಿದ್ದ 3.6 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಸುಕೇಶ್‌ ನಾಯ್ಕ್‌ ಈ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ ಎನ್ನಲಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ಸೂಚನೆಯಂತೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ, ಉಪ ಪೊಲೀಸ್‌ ವರಿಷ್ಠಾಧಿಕಾರಿ ಸದಾನಂದ ನಾಯ್ಕ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆ ಇನ್‌ಸ್ಪೆಕ್ಟರ್‌ ಪ್ರಮೋದ್‌ ಕುಮಾರ್‌ ಕೆ, ಪ್ರೊಬೇಷನರಿ ಸಬ್‌ ಇನ್‌ಸ್ಪೆಕ್ಟರ್‌ಗಳಾದ ಸುಹಾಸ್‌ ಆರ್‌, ಪ್ರಸಾದ್‌ಕುಮಾರ್‌ ತನಿಖೆ ನಡೆಸಿದ್ದಾರೆ.

 

Comments are closed.