ಕರಾವಳಿ

ಕರಾವಳಿ ಜಿಲ್ಲೆಗಳಲ್ಲಿ ವರುಣನ ಅಬ್ಬರ; ಇನ್ನು ನಾಲ್ಕು ದಿನ ಮಳೆ‌ ಸಾಧ್ಯತೆ

Pinterest LinkedIn Tumblr

ಮಂಗಳೂರು/ಉಡುಪಿ: ಅರಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಮತ್ತು ದಕ್ಷಿಣ ಭಾರತದಲ್ಲಿ ನಿಮ್ನ ಒತ್ತಡ (ಟ್ರಫ್‌) ಇರುವ ಕಾರಣ ಕರಾವಳಿಯಾದ್ಯಂತ ಮಂಗಳವಾರ ಮಧ್ಯಾಹ್ನದ ಬಳಿಕ ಬಿರುಸಿನ ಮಳೆಯಾಗಿದೆ.

ದ.ಕ. ಜಿಲ್ಲೆಯಾದ್ಯಂತ ಮಂಗಳವಾರ ದಿನವಿಡೀ ಉತ್ತಮ ಗಾಳಿ ಮಳೆಯಾಗಿದ್ದು, ಕೆಲವು ಕಡೆ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು. ಬೆಳ್ತಂಗಡಿ, ಧರ್ಮಸ್ಥಳ, ಉಜಿರೆ, ಉಪ್ಪಿನಂಗಡಿ, ಪುತ್ತೂರು, ಕಡಬ, ಗುರುವಾಯನಕೆರೆ, ಮೂಡುಬಿದಿರೆ, ಬಂಟ್ವಾಳ, ಪುಂಜಾಲಕಟ್ಟೆ, ಮಡಂತ್ಯಾರು, ಸುರತ್ಕಲ್‌, ಮುಡಿಪು, ಮಂಗಳೂರು, ವಿಟ್ಲ, ಕನ್ಯಾನ, ಪಂಜ, ಸುಳ್ಯ, ಸುಬ್ರಹ್ಮಣ್ಯ, ಕಲ್ಲುಗುಡ್ಡೆ, ಐನೆಕಿದು, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.

ನಾಲ್ಕು ದಿನ ಮಳೆ ಸಾಧ್ಯತೆ
ಹವಾಮಾನ ಇಲಾಖೆಯ ಮುನ್ಸೂಚನೆ ಯಂತೆ ಕರಾವಳಿಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಸಮುದ್ರದ ಅಬ್ಬರ ಕೂಡ ಹೆಚ್ಚಿರುವ ಸಾಧ್ಯತೆ ಇದ್ದು, ಮೀನುಗಾರರು ಜಾಗ್ರತೆಯಿಂತೆ ಸೂಚನೆ ನೀಡಲಾಗಿದೆ.

ಉಡುಪಿಯಲ್ಲೂ ಬಾರೀ‌ ಮಳೆ..
ಉಡುಪಿ ಜಿಲ್ಲೆಯಾದ್ಯಂತ ಮಂಗಳವಾರ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ನಗರ ಸೇರಿದಂತೆ ಕೆಲವು ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ ಎದುರಾಗಿದೆ. ಬೆಳಗ್ಗೆಯಿಂದ ಮೋಡದ ವಾತಾವರಣ ಇದ್ದು, ಸಂಜೆಬಳಿಕ ಭಾರೀ ಮಳೆ ಸುರಿಯಿತು. ಕೆಲವೆಡೆ ವಿದ್ಯುತ್‌ ವ್ಯತ್ಯಯವಾಯಿತು.

Comments are closed.