ಕುಂದಾಪುರ: ನನ್ನ ಹುಟ್ಟಿನಿಂದ ನಾನು ಜಾತಿ ಸಂಘಕ್ಕೆ ಹೋದವನಲ್ಲ. ಪ್ರಬಲ ಜಾತಿಯಲ್ಲಿ ಹುಟ್ಟಿದ್ದು ಆಕಸ್ಮಿಕ. ಆದರೆ ಎಲ್ಲಾ ಜಾತಿಯವರು ಮತ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ಒಂದು ಜಾತಿಯ ಉದ್ದಾರಕ್ಕಾಗಿ ಜನರು ನನ್ನನ್ನು ಗೆಲ್ಲಿಸಿದ್ದಲ್ಲ. ನಾನು ಜಾತ್ಯಾತೀತ ರಾಜಕಾರಣಿ. ಜಾತಿವಾದಿಗಳು ಜಾತಿಯ ಸಂಘಕ್ಕೆ ಮಾತ್ರ ಸಚಿವರಾಗಬೇಕು. ಜಾತಿವಾದಿಗಳು ಯಾವುದೇ ಕಾರಣಕ್ಕೂ ಶಾಸಕರಾಗಬಾರದು ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

(ಸಂಗ್ರಹ ಚಿತ್ರ)
ಮಾಧ್ಯಮದವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಶಾಸಕ ಹಾಲಾಡಿ, ಜಾತಿವಾದಿಗಳು ಸಾರ್ವತ್ರಿಕ ಚುನಾವಣೆಗೆ ಬರಬಾರದು. ನನ್ನಲ್ಲಿ ಯಾವುದೇ ನಾಟಕೀಯ ಮಾತುಗಳು ಇಲ್ಲ. ಉಪಯೋಗಕ್ಕೆ ಇಲ್ಲದ್ದನ್ನು ಕೊಟ್ಟರೆ ಕಿಸೆಗೆ ಹಾಕಿಕೊಂಡು ಬರುವುದಿಲ್ಲ. ಅಲ್ಲಿಯೇ ಬಿಟ್ಟು ಬರುವ ವ್ಯಕ್ತಿತ್ವ ನನ್ನದು. ಶಾಸಕರು ಹೆರಿಗೆ ಕೋಣೆಯ ದಾದಿಯ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಹಾಲಾಡಿ ನೇರವಾಗಿ ಜಾತಿ ರಾಜಕಾರಣದ ವಿರುದ್ದಆಕ್ರೋಶ ಹೊರಹಾಕಿದ್ದಾರೆ.
ನಾನು ಎಂದೂ ಲಾಬಿ ಮಾಡಿಲ್ಲ…
ನನಗೆ ಸಚಿವ ಸ್ಥಾನ ಕೊಡಿ ಎಂದು ಯಾವತ್ತೂ ನಾಯಕರ ಮುಂದೆ ನಾನು ಬೇಡಿಕೆ ಇಟ್ಟವನಲ್ಲ. ಸಚಿವ ಸ್ಥಾನ ಕೇಳಿ ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲ. ಹಿಂದೆ ಸಚಿವ ಸ್ಥಾನ ಕೊಡುತ್ತೇನೆಂದು ನನ್ನನ್ನು ಕರೆದು ತಪ್ಪು ಮಾಡಿದ್ದರು. ಆದರೆ ನಾನು ಹೆಡ್ಡ ರಾಜಕಾರಣಿ ಅಲ್ಲ. ಸಚಿವ ಸ್ಥಾನಕ್ಕಾಗಿ ಯಾರ ಕಾಲಿಗೂ ಬೀಳೋದಿಲ್ಲ. ರಾಜಕೀಯದಲ್ಲಿ ಸಮತೋಲನ ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ನಾನು ಸಚಿವ ಸ್ಥಾನವನ್ನು ಯಾರ ಬಳಿಯೂ ಕೇಳಲು ಹೋಗುವುದಿಲ್ಲ. ನನ್ನ ಶ್ವಾಸ ಇದ್ದರೆ ನಾನು ಬೆಂಗಳೂರಿಗೆ ಸಚಿವ ಸ್ಥಾನ ಕೇಳಲು ಹೋಗುವುದಿಲ್ಲ. ಯಾವ ನಾಯಕನ ಹಿಂದೆ ಸುತ್ತು ಬರುತ್ತಾ ತಿರುಗಾಡಲು ಹೋಗುವುದಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ಸ್ವಾಭಿಮಾನ ಬಿಟ್ಟಿಲ್ಲ ಎಂದಿದ್ದಾರೆ.
ಮಂತ್ರಿಯಾದರೆ ಕಾರು, ಎಸ್ಕಾರ್ಟ್ ತೆಗೆಕೊಳ್ಳಲ್ಲ:
ರಾಜಕೀಯ ಲಾಬಿ ಜಾತಿವಾದಿತನ ನಾನು ಮಾಡುವುದಿಲ್ಲ. ಯಾರ ಕಾಲಿಗೆ ಬಿದ್ದು ನಾನು ಕೆಲಸ ತೆಗೆದುಕೊಳ್ಳುವುದಿಲ್ಲ. ಕೆಲಸ ಕೊಟ್ಟರೆ ನಾನು ಅದನ್ನು ನಿಭಾಯಿಸುತ್ತೇನೆ. ಒಂದು ವೇಳೆ ನಾನು ಮಂತ್ರಿಯಾದರೆ ಸರಕಾರಿ ಕಾರು, ಎಸ್ಕಾರ್ಟ್, ಗನ್‌ಮ್ಯಾನ್ ತೆಗೆದುಕೊಳ್ಳುವುದಿಲ್ಲ. ಸಚಿವ ಸ್ಥಾನ ಕೊಡುವ ಬಗ್ಗೆ ನನಗೆ ಈವರೆಗೆ ಯಾವುದೇ ಕರೆಗಳು ಬಂದಿಲ್ಲ. ಕರೆ ಬಂದರೆ ನಾನು ಇದನ್ನು ಹೇಳಲು ಸಿದ್ದ ಇದ್ದೇನೆ. ನನ್ನದು ನೇರನುಡಿಯ ರಾಜಕಾರಣ. ಹಾಗಂತ ಇದು ದುರಹಂಕಾರದ ಮಾತಲ್ಲ, ನಾನು ಯಾರ ಭಯದಲ್ಲೂ ಇಲ್ಲ. ಮತದಾರರ ಮತ್ತು ಕಾರ್ಯಕರ್ತರ ಋಣದಲ್ಲಿ ನಾನಿದ್ದೇನೆ ಎಂದಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಐದು ಭಾರಿ ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಈ ಬಾರಿಯಾದರೂ ಸಚಿವ ಸ್ಥಾನ ಸಿಗಬೇಕೆನ್ನುವುದು ಕ್ಷೇತ್ರದ ಜನರ ಹಾಗೂ ಅವರ ಅಭಿಮಾನಿಗಳ ಬೇಡಿಕೆಯಾಗಿದ್ದಯ ಈ ಬಗ್ಗೆ ಹಾಲಾಡಿ ಅಭಿಮಾನಿಗಳು ಸಾಮಾಜಿಕ ಜಾಲಾತಾಣದಲ್ಲಿ ಅಭಿಯಾನ ಆರಂಭಿಸಿದ್ದಲ್ಲದೆ ಇಂದು ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಸಿಎಂ ಹಾಗೂ ಪಕ್ಷದ ವರಿಷ್ಟರನ್ನು ಆಗ್ರಹಿಸಿದ್ದಾರೆ.
Comments are closed.