ಕರಾವಳಿ

ಆರು ತಿಂಗಳ ಮಗುವಿಗೆ ಕೋವಿಡ್ ಟೆಸ್ಟ್ ಮಾಡದ ಹಿನ್ನೆಲೆ; ಕುವೈತ್‌ ವಿಮಾನ ನಿಲ್ದಾಣದಲ್ಲಿ ತಾಯಿ-ಮಗುವಿಗೆ ತಡೆ: ನೆರವಿಗೆ ಬಂದ ವಿದೇಶಾಂಗ ಇಲಾಖೆ-ಶೋಭಾ ಕರಂದ್ಲಾಜೆ

Pinterest LinkedIn Tumblr

ಮಂಗಳೂರು: ಆರು ತಿಂಗಳ ಮಗುವಿಗೆ ಕೋವಿಡ್ ಟೆಸ್ಟ್ ಮಾಡಿಸಿಲ್ಲ ಎಂಬ ಕಾರಣಕ್ಕೆ ಕುವೈತ್‌ನಿಂದ ಮಂಗಳೂರಿಗೆ ಪ್ರಯಾಣಿಸುವ ತಾಯಿ ಹಾಗು ಮಗುವನ್ನು ತಡೆಹಿಡಿದಾಗ ಭಾರತೀಯ ವಿದೇಶಾಂಗ ಇಲಾಖೆ ಹಾಗು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯ ಕ್ಷಿಪ್ರ ಸ್ಪಂದನೆಯಿಂದಾಗಿ ತವರಿಗೆ ಮರಳುವಂತಾಗಿದೆ.

ಆರ್‌ಟಿಪಿಸಿಆರ್ ನಿಯಮ ಕಾರಣಕ್ಕೆ ಶನಿವಾರ ಕುವೈತ್‌ನಿಂದ ಮಂಗಳೂರಿಗೆ ಪ್ರಯಾಣಿಸುವ ವಿಮಾನ ಕೈ ತಪ್ಪುವ ಭೀತಿಯಲ್ಲಿದ್ದ ಮಂಗಳೂರಿನ ಮಹಿಳೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೆರವಾಗಿದ್ದಾರೆ.

ಕುವೈತ್‌ನಲ್ಲಿ ಪತಿ ಜತೆಗಿದ್ದ ಕುಂಟಿಕಾನ ನಿವಾಸಿ ಅದಿತಿ ಸುದೇಶ್ ನಾಯಕ್ ತಮ್ಮ ಬೆನ್ನುಮೂಳೆಯ ಚಿಕಿತ್ಸೆಗಾಗಿ ಆರು ತಿಂಗಳ ಹಸುಗೂಸಿನೊಂದಿಗೆ ಶನಿವಾರ ಸಾಯಂಕಾಲ ಕುವೈತ್‌ನಿಂದ ಮಂಗಳೂರಿಗೆ ಬರಬೇಕಿತ್ತು. ಇದಕ್ಕಾಗಿ ಅದಿತಿ ಕುವೈತ್‌ನಲ್ಲಿಯೇ ಕೋವಿಡ್ ದೃಢೀಕರಿಸುವ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿದ್ದರು. ವಿಮಾನ ಯಾನ ನಡೆಸಲು ಆರು ತಿಂಗಳ ಮಗುವಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಅಗತ್ಯವಿಲ್ಲ ಎಂದು ಏರ್ ಇಂಡಿಯಾ ಕಚೇರಿ ಸಿಬ್ಬಂದಿ ತಿಳಿಸಿದ ಕಾರಣ ಮಗುವಿನ ಪರೀಕ್ಷೆ ಮಾಡಿಸಿರಲಿಲ್ಲ. ಆದರೆ ಕುವೈತ್ ವಿಮಾನ ನಿಲ್ದಾನದಲ್ಲಿ ದಾಖಲೆ ಪರಿಶೀಲಿಸಿದ ಅಧಿಕಾರಿಗಳು, ಭಾರತದ ನಿಯಮ ಪ್ರಕಾರ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದೆ ಮಗುವಿನ ಪ್ರಯಾಣ ಸಾಧ್ಯವಿಲ್ಲ ಎಂದರು.

ಅದಿತಿ ಅವರ ಪತಿ ಸುದೇಶ್ ನಾಯಕ್, ಮಂಜೇಶ್ವರ ಮೋಹನ್‌ದಾಸ್ ಕಾಮತ್ ಅವರನ್ನು ಸಂಪರ್ಕಿಸಿ ಮಾಹಿತಿ ತಿಳಿಸಿದರು. ವಿಮಾನ ಹೊರಡಲು ಕೇವಲ ಒಂದು ಗಂಟೆ ಸಮಯವಿದ್ದಾಗ ಟ್ವೀಟ್ ಮಾಡಿದ ಕಾಮತ್, ಸಮಸ್ಯೆಯನ್ನು ಪ್ರಧಾನಿ ಮತ್ತು ವಿದೇಶಾಂಗ ಸಚಿವರ ಗಮನಕ್ಕೆ ತಂದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ನೀಡಿದರು. ತಕ್ಷಣ ಕೇಂದ್ರ ವಿದೇಶಾಂಗ ಸಚಿವ ವಿ.ಮುರಳೀಧರನ್ ಅವರನ್ನು ಕೂಡಲೇ ಸಂಪರ್ಕಿಸಿದ ಕರಂದ್ಲಾಜೆ, 10 ನಿಮಿಷದಲ್ಲಿ ತಾಯಿ ಮತ್ತು ಮಗುವಿಗೆ ಮಂಗಳೂರಿಗೆ ಹೊರಡುವ ವಿಮಾನದಲ್ಲಿ ಸಂಚರಿಸಲು ಅನುಮತಿ ಒದಗಿಸಿದರು. ಶನಿವಾರ ಸಾಯಂಕಾಲ ಮಂಗಳೂರಿಗೆ ಹೊರಟ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಅದಿತಿ ಮಗುವಿನ ಜೊತೆ ಪ್ರಯಾಣ ಬೆಳೆಸಿದ್ದಾರೆ.

Comments are closed.