ಕರಾವಳಿ

ನಮ್ಮ ಸಮಾಜದಲ್ಲಿ ಯಾವುದೇ ಒಡಕಿಲ್ಲ; ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ: ಖಾರ್ವಿ‌ ಸಮಾಜದ ಮುಖಂಡರು

Pinterest LinkedIn Tumblr

ಕುಂದಾಪುರ: ಕೊಂಕಣಿ ಖಾರ್ವಿ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ. ಸಾಮಾಜಿಕ, ಶೈಕ್ಷಣಿಕ ವಿಚಾರದಲ್ಲಿ ಇಡೀ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಖಾರ್ವಿ ಸಮಾಜದಲ್ಲಿ ಯಾವುದೇ ಸಂಘರ್ಷ ನಡೆದಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ, ಸಮಾಜದ ಜನರ ನಡುವೆ ಯಾವುದೇ ಗೊಂದಲಗಳಿಲ್ಲ. ಒಬ್ಬ ವ್ಯಕ್ತಿಯ ವೈಯಕ್ತಿಕ ಸಮಸ್ಯೆಗಾಗಿ ಇಡೀ ಸಮಾಜದ ದೂಷಣೆ ಮಾಡುವುದು ಸರಿಯಲ್ಲ ಎಂದು ಖಾರ್ವಿಕೇರಿ ಮಹಾಕಾಳಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜಯಾನಂದ ಖಾರ್ವಿ ಹಾಗೂ ವಿದ್ಯಾರಂಗ ಮಿತ್ರ ಮಂಡಳಿ ಅಧ್ಯಕ್ಷ ಅರುಣ್ ಖಾರ್ವಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ.

ಅವರು ಕುಂದಾಪುರ ವಿದ್ಯಾರಂಗ ಮಿತ್ರಮಂಡಳಿಯಲ್ಲಿ ಆಯೋಜಿಸಿದ್ದ ಸಮಾಜದ ಮುಖಂಡರ ಸಭೆ ಬಳಿಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸಮಾಜದವರೇ ಆದ ಸತೀಶ್ ಖಾರ್ವಿ ಕಜಕಿಸ್ಥಾನದಲ್ಲಿ ನಡೆದ ಭಾರ ಎತ್ತುವ ಸ್ಪರ್ಧೆಗೆ ಹಣಕಾಸಿನ ನೆರವು ಕೇಳಿದ್ದರು. ಆ ಸಂದರ್ಭದಲ್ಲಿ ವಿದ್ಯಾರಂಗ ಮಿತ್ರಮಂಡಳಿಯ ಸುವರ್ಣ ಮಹೋತ್ಸವ ಕಟ್ಟಡ ನಿರ್ಮಾಣಕ್ಕಾಗಿ ಮುಂದಾಗಿದ್ದೆವು. ಅಲ್ಲದೆ ದಾನಿಗಳಿಂದ ವಂತಿಗೆ ಮಾಡುತ್ತಿದ್ದು ಹಣಕಾಸಿನ ಆಡಚಣೆ ಇದ್ದಿದ್ದರಿಂದ ಸತೀಶ್ ಅವರಿಗೆ ನೆರವು ನೀಡಲಾಗಲಿಲ್ಲ. ಕಜಕಿಸ್ಥಾನದಲ್ಲಿ ಗೆದ್ದು ಬಂದಾಗ ಅವರನ್ನು ಕುಂದಾಪುರದಲ್ಲಿ ಮೆರವಣಿಗೆ ಮೂಲಕ ಬರಮಾಡಿಕೊಂಡಿದ್ದಲ್ಲದೆ ವಿದ್ಯಾರಂಗದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿತ್ತು. ಸನ್ಮಾನ ಸ್ವೀಕಾರದ ಬಳಿಕ ಅವರು ಸಂಸ್ಥೆ ಕುರಿತು ನಿಂದನೆ ಮಾಡಿ ಮಾತನಾಡಿದರು. ಇದು ಜಾಲತಾಣಗಳಲ್ಲಿ ಚರ್ಚೆಯಾಗಿ ಪೊಲೀಸ್ ದೂರು ದಾಖಲಾಗಿ, ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿತ್ತು . ಅದೇ ಘಟನೆ ಇಟ್ಟುಕೊಂಡು ಸಮಾಜದ ಕುರಿತು ತಪ್ಪು ಅಭಿಪ್ರಾಯ ಮಾಡುವಂತಹ ಸಂದೇಶಗಳನ್ನು ಜಾಲತಾಣದಲ್ಲಿ ಮಾಡುತ್ತಿದ್ದು ಆ ಕುರಿತು ಸಮಾಜ ಮುಂದಿನ ದಿನದಲ್ಲಿ ಕ್ರಮ ಕೈಗೊಳ್ಳಲಿದೆ ಎಂದರು.

ಕುಂದಾಪುರ ಪುರಸಭಾ ಸದಸ್ಯ ಚಂದ್ರಶೇಖರ್ ಖಾರ್ವಿ ಮಾತನಾಡಿ, ಏಕವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಸಮಾಜವನ್ನು ಬೆರಳು ಮಾಡುವುದು ಸೂಕ್ತವಲ್ಲ. ವ್ಯಕ್ತಿ ತಪ್ಪು ಮಾಡಬಹುದೇ ಹೊರತು ಸಮಾಜ ಎಂದೂ ತಪ್ಪು ಮಾಡುವುದಿಲ್ಲ. ಕಜಕಿಸ್ಥಾನಕ್ಕೆ ಅವರು ತೆರಳಿದ್ದಾಗ ಸಂಪರ್ಕದಲ್ಲಿದ್ದು ಗೆದ್ದಾಗಲೂ ಸಂತಸಪಟ್ಟಿದ್ದೆವು. ವಿದ್ಯಾರಂಗ ಮಿತ್ರಮಂಡಳಿ ಸತೀಶ್ ಖಾರ್ವಿಯವರನ್ನು ಗೌರವದಿಂದ ಕಂಡಿದ್ದು ಅಗೌರವ ತೋರಿಸಿಲ್ಲ. ಸಂಸ್ಥೆಯನ್ನು ದೂರಿದಾಗ ಸಮಾಜ ಆ ವ್ಯಕ್ತಿಯನ್ನು ದೂರವಿಟ್ಟಿದ್ದು ಇಂತವರಿಗೆ ಪ್ರೋತ್ಸಾಹ ಮಾಡಬಾರದು. ವೈಯಕ್ತಿಕ ಲಾಭ ಬಿಟ್ಟು ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕಿದೆ ಎಂದರು.

ದೇವಸ್ಥಾನದ ಉಪಾಧ್ಯಕ್ಷ ಗಣಪತಿ ಖಾರ್ವಿ, ವಿದ್ಯಾರಂಭ ಮಿತ್ರ ಮಂಡಳಿ ಕಾರ್ಯದರ್ಶಿ ಗಣೇಶ್ ನಾಯ್ಕ್, ಕುಂದಾಪುರ ಪುರಸಭೆ ಉಪಾಧ್ಯಕ್ಷ ಸಂದೀಪ ಖಾರ್ವಿ, ಮಾಜಿ ಅಧ್ಯಕ್ಷೆ ವಸಂತಿ ಸಾರಂಗ, ಚಿಪ್ಪು ಕಾರ್ಮಿಕರ ಸಂಘದ ಅಧ್ಯಕ್ಷ ಜನಾರ್ದನ ಪಟೇಲ್, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ದಿನಕರ ಪಟೇಲ್, ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಪ್ರಕಾಶ್ ಖಾರ್ವಿ, ಮುಖಂಡರಾದ ನಾರಾಯಣ ಖಾರ್ವಿ, ರಾಘವೇಂದ್ರ ಖಾರ್ವಿ, ಜನಾರ್ದನ ಖಾರ್ವಿ, ದಿನೇಶ್ ಖಾರ್ವಿ ಉಪಸ್ಥಿತರಿದ್ದರು.

Comments are closed.