ಕರಾವಳಿ

‘100 ನಾಟೌಟ್’; ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಬಂಕ್ ಎದುರು ಜಾಗಟೆ ಬಾರಿಸಿ ಪ್ರತಿಭಟಿಸಿದ ಬೈಂದೂರು ಕಾಂಗ್ರೆಸ್

Pinterest LinkedIn Tumblr

ಕುಂದಾಪುರ: ಬ್ಲಾಕ್ ಕಾಂಗ್ರೆಸ್ ಸಮಿತಿ ಬೈಂದೂರು ವತಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಬೈಂದೂರಿನಲ್ಲಿ ಪ್ರತಿಭಟನೆ ನಡೆದಿದೆ.

ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಗೋಪಾಲ ಪೂಜಾರಿ, ಕೊರೋನಾ ಸಂದರ್ಭದಲ್ಲಿ ಪೆಟ್ರೋಲ್ ಬೆಲೆ 100ಕ್ಕೆ ಹಾಗೂ ಡಿಸೇಲ್ ಬೆಲೆ 94ಕ್ಕೆ ಏರಿಕೆ ಮಾಡಿ ಸಂಪೂರ್ಣ ವ್ಯವಸ್ಥೆಯಲ್ಲಿ ದರ ಏರಿಕೆಯ ಕೆಲಸವನ್ನು ಮೋದಿ ಮಾಡಿ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಕೇಂದ್ರ ಸರಕಾರ ಕೊರೋನಾ ಸಂಕಷ್ಟದಲ್ಲಿ ದರ ಇಳಿಸುವ ಕೆಲಸ ಮಾಡಬೇಕು. ಕೊರೋನಾದಿಂದ ಉದ್ಯೋಗವಿಲ್ಲದೆ ಜನರು ಸಂಕಷ್ಟದಲ್ಲಿದ್ದಾರೆ. ಉದ್ಯೋಗ, ಪರಿಹಾರ ಕೊಡಬೇಕು. ಮನೆಯಲ್ಲಿ ಕುಳಿತವರಿಗೆ ಸಹಾಯ ಹಸ್ತವನ್ನು ಚಾಚುವ ಕೆಲಸವನ್ನು ಸರ್ಕಾರ ಮಾಡಬೇಕು. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ ಕಚ್ಛಾ ತೈಲದ ಬೆಲೆ ಡಾಲರ್ ಗೆ 100 ರಿಂದ 120 ರ ವರೆಗೆ ಇದ್ದಂತಹ ಸಂದರ್ಭದಲ್ಲಿ 75 – 76 ರೂ.ನಲ್ಲಿ ಪೆಟ್ರೋಲ್, 44 ರಿಂದ 46 ರೂ.ಬೆಲೆಯಲ್ಲಿ ಡೀಸೆಲ್ ಬೆಲೆ ಕೊಡುತ್ತಿದ್ದೆವು. ಮೋದಿ ಸರ್ಕಾರ ಬಂದ ಮೇಲೆ ಕಚ್ಚಾ ತೈಲ ಬೆಲೆ 75 ರಿಂದ 76 ರೂ. ಇದೆ. 2016 ರಲ್ಲಿ 40-45 ರೂ. ಕಚ್ಛಾ ತೈಲ ಬೆಲೆ ಇದ್ದಂತಹ ಸಂದರ್ಭದಲ್ಲಿ ಯಾವುದೇ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡದೆ, ಹೆಚ್ಚು ಮಾಡುವ ಕೆಲಸ ಮಾಡಿದ್ದಾರೆ. 75-76 ರೂ. ಇರುವ ಸಂದರ್ಭದಲ್ಲಿ 100 ರೂ.ಗೆ ಹೆಚ್ಚಿಸಿರುವ ಕೆಲಸ ಮಾಡಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಗ್ಯಾಸ್ ಸಿಲಿಂಡರ್ ಬೆಲೆ 414 ರೂ. ಇತ್ತು. ಈಗ 800 ರಿಂದ 900 ತನಕ ಏರಿಕೆಯಾಗಿದೆ, 2020 ರ ನಂತರ ಸಬ್ಸಿಡಿಯನ್ನೂ ರದ್ದು ಮಾಡಲಾಗಿದೆ. ಉದ್ಯೋಗ ಸೃಷ್ಟಿಸುವ ಭರವಸೆಯನ್ನೂ ನೀಡಿ ಮೋದಿಯವರು ಸುಳ್ಳು ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡರಾದ ರಾಜು ಪೂಜಾರಿ ಮದನ್ ಕುಮಾರ್ ,ನಾಗರಾಜ್ ಗಾಣಿಗ, ಜಗದೀಶ್ ದೇವಾಡಿಗ, ಗೌರಿ ದೇವಾಡಿಗ, ಶೇಖರ್ ಪೂಜಾರಿ, ದಿನೇಶ್ ನಾಯ್ಕ್ ಹಳ್ಳಿಹೊಳೆ ಮೊದಲಾದವರಿದ್ದರು.

Comments are closed.