ಕರಾವಳಿ

ಉಡುಪಿ‌ ಜಿಲ್ಲೆಯ ನೂತನ ಆರೋಗ್ಯಾಧಿಕಾರಿಯಾಗಿ ಡಾ.ನಾಗಭೂಷಣ ಉಡುಪ ನೇಮಕ

Pinterest LinkedIn Tumblr

ಕುಂದಾಪುರ: ಪ್ರಸ್ತುತ ತಾಲ್ಲೂಕು ಆರೋಗ್ಯಾಧಿಕಾರಿಯಾಗಿರುವ ಡಾ.ನಾಗಭೂಷಣ ಉಡುಪ ಅವರನ್ನು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಸದ್ಯ ಜಿಲ್ಲಾ ಆರೋಗ್ಯಾಧಿಕಾರಿಯಾಗಿರುವ ಡಾ.ಸುದೀರಚಂದ್ರ ಸೂಡ ಅವರು ಮೇ.31 ರಂದು ಸೇವಾ ನಿವೃತ್ತಿ ಹೊಂದಲಿದ್ದು, ಅವರ ಸ್ಥಾನಕ್ಕೆ ಡಾ.ಉಡುಪ ಅವರನ್ನು ನೇಮಕ ಮಾಡಲಾಗಿದೆ.

ಮೂಲತ: ಕುಂದಾಪುರ ತಾಲ್ಲೂಕಿನವರಾದ ಉಡುಪರು, ಶಂಕರನಾರಾಯಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು, ಬಳಿಕ ಉಡುಪಿಯಲ್ಲಿ ರಾಷ್ಟ್ರೀಯ ಆರೋಗ್ಯ ಮೆಷನ್ ವಿಭಾಗದ ವೈದ್ಯಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದು ಕಳೆದ ಕೆಲವು ವರ್ಷಗಳಿಂದ ಕುಂದಾಪುರ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎರಡು ಬಾರಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಗೆ ಪ್ರಭಾರ ಅಧಿಕಾರ ನಿರ್ವಹಣೆ ಮಾಡಿದ್ದರು. ಕೊರಗರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಕೊರಗ ಸಮುದಾಯದ ಆರೋಗ್ಯ ಸಲಹಾ ವೈದ್ಯರಾಗಿಯೂ ಸೇವೆ ಸಲ್ಲಿಸುತ್ತಿರುವ ಅವರು, ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಸಹಾಯಕ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಸೇವಾ ಕ್ಷೇತ್ರದಲ್ಲಿ ಉತ್ತಮ ಸಾರ್ವಜನಿಕ ಸಂಪರ್ಕ ಹೊಂದಿರುವ ಅಧಿಕಾರಿಯಾಗಿರುವ ಅವರು ರಾಷ್ಟ್ರೀಯ ಆರೋಗ್ಯ ಮೆಷನ್ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಜಿಲ್ಲೆಯ ಮಲೆನಾಡು ಹಾಗೂ ಗ್ರಾಮೀಣ ಭಾಗಗಳಿಗೆ ಹಲವು ಯೋಜನೆಗಳನ್ನು ಪರಿಚಯಿಸಿದ್ದರು.

ದೇಶಾದ್ಯಾಂತ ಕೋವಿಡ್-19 ವಿಷಮ ಪರಿಸ್ಥಿತಿ ನಿರ್ಮಾಣವಾಗಿದ್ದ ಸಂದರ್ಭದಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನಲ್ಲಿ ರೋಗ ನಿಯಂತ್ರಣಕ್ಕಾಗಿ ಹಲವಾರು ಯೋಜನೆಗಳನ್ನು ಪರಿಚಯಿಸಿ ಅವರು ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದರು. ಕೋವಿಡ್ ಗಂಟಲು ಪರೀಕ್ಷೆಗಾಗಿ ರಾಜ್ಯದಲ್ಲಿ ಮೊದಲ ಬಾರಿ ಸಂಚಾರಿ ಘಟಕವನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸೋಂಕಿತರ ಸಂಖ್ಯೆ ಹೆಚ್ಚಾದಾಗ ಆರೈಕೆ ಕೇಂದ್ರಗಳ ಸ್ಥಾಪನೆಯ ಪ್ರಾಸ್ತಾವನೆಗಳು ಬಂದಾಗಲೂ, ರೆಡ್‌ಕ್ರಾಸ್, ರೋಟರಿ, ಲಯನ್ಸ್ ಹಾಗೂ ಇತರ ದಾನಿಗಳ ನೆರವನ್ನು ಕ್ರೋಢಿಕರಿಸಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶ್ರಮಿಸುತ್ತಿದ್ದಾರೆ.

ದಿನದ ಸರ್ಕಾರಿ ಕರ್ತವ್ಯದ ಬಳಿಕ ಅಪ್ಪಟ ಕೃಷಿಕರಾಗುವ ಡಾ.ನಾಗಭೂಷಣ ಉಡುಪ, ಬಿಡುವಿನ ಅವಧಿಯಲ್ಲಿ ತಮ್ಮ ಕೃಷಿ ತೋಟದಲ್ಲಿನ ಕೃಷಿ ಚಟುವಟಿಕಯಲ್ಲಿ ತೊಡಗಿಸಿಕೊಳ್ಳುವುದನ್ನು ರೂಢಿಸಿಕೊಂಡಿದ್ದಾರೆ.

Comments are closed.