ಕರಾವಳಿ

ಪೋಕ್ಸೋ ಪ್ರಕರಣದ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುತ್ತಿದೆ: ಪ್ರಭಾಕರ್ ಆಚಾರ್

Pinterest LinkedIn Tumblr

ಕುಂದಾಪುರ: ಅಪ್ರಾಪ್ತ ವಯಸ್ಸಿನ ಬಾಲಕ ಬಾಲಕಿಯರ ಮೇಲಿನ ಶೋಷಣೆಗಳು, ಬಾಲಕ ಕಾರ್ಮಿಕ ತಡೆ, ಹಾಗೂ ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಇಲಾಖೆ ಕಠಿಬದ್ಧವಾಗಿದೆ ಎಂದು ಉಡುಪಿ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್ ಹೇಳಿದರು.

ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರಕೂರು, ಉಡುಪಿ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕ ಮತ್ತು ಮಹಿಳಾ ಶಕ್ತಿ ಕೇಂದ್ರ, ಅಭಿವೃದ್ಧಿ ಸಂಸ್ಥೆ ಬಾಳ್ಕುದ್ರು-ಹಂಗಾರಕಟ್ಟೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಚಿಕಾನು, ಗ್ರಾಮಪಂಚಾಯತ್ ಬಿಜೂರು ಇವರ ಆಶ್ರಯದಲ್ಲಿ ಬುಧವಾರದಂದು ಉಪ್ಪುಂದದ ಸ.ಹಿ. ಪ್ರಾ. ಶಾಲೆ ಕಂಚಿಕಾನುವಿನಲ್ಲಿ ನಡೆದ ಮಕ್ಕ‌ಳ ಹಕ್ಕುಗಳ ಜಾಗೃತಿ ಕಾರ್ಯಕ್ರಮ, ಮಹಿಳಾ ಸಬಲೀಕರಣ ವಿಶೇಷ ಉಪನ್ಯಾಸ-2021 ಹಾಗೂ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಪೋಕ್ಸೋ ಸಂಬಂಧಿತ ಪ್ರಕರಣಗಳು ಜಾಸ್ಥಿಯಾಗುತ್ತಿದ್ದು ವಿವಿಧ ಠಾಣೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಸಂಬಂದಪಟ್ಟವರು ಮುತುವರ್ಜಿಯಿಂದ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಯಾವುದೇ ಮುಲಾಜಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಪ್ರಾಪ್ತ ವಯಸ್ಸಿನವರ ಮೇಲಾಗುವ ಯಾವುದೇ ದೌರ್ಜನ್ಯಗಳು ನಡೆಯುವುದು ಗಮನಕ್ಕೆ ಬಂದಲ್ಲಿ ಅಥವಾ ಅನುಭವಿಸಿದ ಸಂತ್ರಸ್ತರು ಅದನ್ನು ಮುಚ್ಚಿಡದೆ ಸಂಬಂದಪಟ್ಟ ‌ಮಕ್ಕಳ ಸಹಾಯವಾಣಿಗೆ ದೂರು ನೀಡಿದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಪೋಷಕರು ಮತ್ತು ವಿದ್ಯಾರ್ಥಿಗಳು ಈ ಬಗ್ಗೆ ಜಾಗರುಕರಾಗಿರಬೇಕು, ಮಕ್ಕಳ ಮೊಬೈಲ್ ಬಳಕೆ ಇತಿಮಿತಿಯಿಂದಿರಲಿ. ಪೋಕ್ಸೋ ಕಾಯ್ದೆಯಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವುದು ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದ ಕೆಲ ತೀರ್ಪುಗಳ ಮೂಲಕ ಕಂಡುಬಂದಿದ್ದು ಇದು ಸಮಾಜಕ್ಕೊಂದು ಉತ್ತಮ ಸಂದೇಶ ನೀಡಿದೆ ಎಂದರು.

ಬಾಲ ಕಾರ್ಮಿಕ, ಕಿಶೋರ‌ ಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯಡಿ ಉಡುಪಿ‌ ಜಿಲ್ಲೆಯಲ್ಲಿ ಈಗಾಗಲೇ ಹಲವು ದಾಳಿಗಳು ನಡೆದಿದೆ. ಸಂಬಂದಪಟ್ಟ ಮಾಲಿಕರ ವಿರುದ್ಧ ಶಿಸ್ತು‌ಕ್ರಮ ಕೈಗೊಂಡಿದ್ದೇವೆ. ಇನ್ನು ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪದ್ಧತಿ‌ ಇಲ್ಲವಾದರೂ ಕೂಡ ಕಳೆದ ಕೆಲ ತಿಂಗಳ ಹಿಂದೆ ಸಂಭವ್ಯ ಬಾಲ್ಯ ವಿವಾಹವನ್ನು ಇಲಾಖೆ ತಡೆದು ಕ್ರಮಕೈಗೊಂಡಿದೆ. ಜನರಲ್ಲಿ‌ ಮಕ್ಕಳ ವಿರುದ್ಧ ನಡೆಯಬಹುದಾದ ಶೋಷಣೆ ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಇಲಾಖೆ ಕ್ರಮವಹಿಸಿದೆ ಎಂದರು.

ಬೈಂದೂರು ಪೊಲೀಸ್ ಠಾಣೆ ಉಪನಿರೀಕ್ಷಕಿ ಸಂಗೀತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ದೇಶ ಮುಂದುವರಿಯಲು ಸಾಧ್ಯವಾಗಿದ್ದು ಪೋಷಕರು ವಿದ್ಯೆ ಜೊತೆಗೆ ವಿನಯತೆಯನ್ನು ಮಕ್ಕಳಲ್ಲಿ ಕಲಿಸುವ ಮೂಲಕ ವಿವೇಕ, ಸಂಸ್ಕಾರ ಕಲಿಸಬೇಕಿದೆ. ಮನೆಯ ನಾಲ್ಕು ಗೋಡೆಯ ಮದ್ಯೆಯಿದ್ದ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಇದೀಗಾ ಮುಂಚೂಣಿಯಲ್ಲಿರುವುದು ಖುಷಿಯ ವಿಚಾರ ಎಂದರು.

ಉಡುಪಿ ರಜತ್ರಾದಿಯಲ್ಲಿರುವ ಮಹಿಳಾ ಶಕ್ತಿಕೇಂದ್ರದ ಜಿಲ್ಲಾ ಸಂಯೋಜಕಿ ಶಾರದಾ ಮಹಿಳಾ ಸಬಲೀಕರಣದ ಕುರಿತು ಉಪನ್ಯಾಸ ನೀಡಿದರು. ಬಾಳ್ಕುದ್ರುವಿನ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ರಮೇಶ್ ವಕ್ವಾಡಿ, ಖಂಬದಕೋಣೆ ಸಂವೇದನಾ ಪ್ರಥಮ ದರ್ಜೆ ಕಾಲೇಜಿನ ಅಧ್ಯಕ್ಷ ಡಾ.‌ ಸುಬ್ರಮಣ್ಯ ಭಟ್, ನಮ್ಮ ಭೂಮಿ ಸಂಸ್ಥೆಯ ಕೃಪಾ ಎಂ.ಎಂ ಮಾತನಾಡಿದರು.

ಬಿಜೂರು ಗ್ರಾ.ಪಂ‌. ಉಪಾಧ್ಯಕ್ಷೆ ಶ್ರೀಮತಿ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಸದಸ್ಯ ಜಗದೀಶ್ ದೇವಾಡಿಗ, ಬಿಜೂರು ಪಿಡಿಒ ಸತೀಶ್ ತೋಳಾರ್, ವಜ್ರದುಂಬಿ ಬಳಗದ ರಾಘವೇಂದ್ರ ಬೈಟು, ಬಿಜೂರು ಗ್ರಾ.ಪಂ ಸದಸ್ಯರು, ಶಾಲಾ ಶಿಕ್ಷಕ ವೃಂದದವರು ಇದ್ದರು.

ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳಾದ ದೀಪಾ‌ ಕಾರ್ಯಕ್ರಮ ನಿರೂಪಿಸಿ, ಕ್ರಿಸ್ಟೀನಾ ಸ್ವಾಗತಿಸಿ, ರವೀಂದ್ರ ವಂದಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.