ಕರಾವಳಿ

ತಮ್ಮ ವಾರ್ಡ್‌ಗೆ ಸಿಗದ ಅಧ್ಯಕ್ಷ ಸ್ಥಾನ: ಮುಂದಿನ ಚುನಾವಣೆಗೆ ಬಿಜೆಪಿ ಪರ ಕೆಲಸ ಮಾಡಲ್ಲವೆಂದ ಕಾರ್ಯಕರ್ತರು!

Pinterest LinkedIn Tumblr

ಕುಂದಾಪುರ: ಹಕ್ಲಾಡಿ ಗ್ರಾ.ಪಂ ವ್ಯಾಪ್ತಿಯ ತೊಪ್ಲು ಒಂದನೇ ವಾರ್ಡ್‌ನ ಗ್ರಾ.ಪಂ ಸದಸ್ಯ ಬಸವ ಪಿ ಮೊಗವೀರ ಅವರಿಗೆ ಅಧ್ಯಕ್ಷ ಸ್ಥಾನ ಕೊಡದೆ ನಿರಾಕರಿಸಿದ ಬಗ್ಗೆ ಅವರ ಬೆಂಬಲಿಗರು ತೊಪ್ಲು ಅರೆಕಲ್ಲು ಶ್ರೀ ನಾಗ ದೇವಸ್ಥಾನದ ಎದುರು ಸೋಮವಾರ ಸಂಜೆ ಪ್ರತಿಭಟನೆ ನಡೆಸಿ ಬಿಜೆಪಿ ಮುಖಂಡರ ವಿರುದ್ದ ಆಕ್ರೋಶ ಹೊರಹಾಕಿದರು.

ಮೀಸಲಾತಿ ಪ್ರಕಟವಾದ ದಿನದಿಂದಲೂ ನಾವು ಪಕ್ಷದ ಮುಖಂಡರಲ್ಲಿ ಬಸವ ಪಿ ಮೊಗವೀರ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ ನಿಷ್ಠಾವಂತ ಕಾರ್ಯಕರ್ತರ ಮನವಿಗೆ ಕಿವಿ ಕೊಡದ ಮುಖಂಡರು ಬೇರೆಯವರಿಗೆ ಮಣೆ ಹಾಕಿದ್ದಾರೆ. ನಮ್ಮ ವಾರ್ಡ್‌ಗೆ ಅಧ್ಯಕ್ಷ ಸ್ಥಾನ ಕೊಡದ ಬಿಜೆಪಿಯ ವಿರುದ್ದ ನಾವೆಲ್ಲರೂ ತಟಸ್ಥ ನೀತಿಯನ್ನು ಅನುಸರಿಸುತ್ತೇವೆ. ಪಕ್ಷದ ಏಕಪಕ್ಷೀಯ ನಿರ್ಧಾರಗಳಿಂದಾಗಿ ಮನನೊಂದಿದೆ. ಇನ್ನು ಮುಂದೆ ನಡೆಯುವ ಪಕ್ಷದ ಯಾವುದೇ ಕಾರ್ಯಕ್ರಮಗಳಿಗೆ ನಾವು ಭಾಗವಹಿಸುವುದಿಲ್ಲ. ಅಲ್ಲದೇ ಮುಂದಿನ ತಾ.ಪಂ, ಜಿ.ಪಂ, ವಿಧಾನಸಭಾ ಚುನಾವಣೆಯಲ್ಲೂ ನಾವು ಬಿಜೆಪಿಯ ಪರ ಕೆಲಸ ಮಾಡುವುದಿಲ್ಲ ಎಂದು ಪ್ರತಿಭಟನಾಕಾರರು ಬಿಜೆಪಿ ವಿರುದ್ದ ಆಕ್ರೋಶ ಹೊರಗೆಡವಿದ್ದಾರೆ.

ಹಿರಿಯ, ಅನುಭವಿ ಸದಸ್ಯರನ್ನು ಸಂಪೂರ್ಣವಾಗಿ ಕಡೆಗಣಿಸಿ ಹಕ್ಲಾಡಿ ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ತೊಪ್ಲು ವಾರ್ಡ್ ಬಿಜೆಪಿಯ ಭದ್ರಕೋಟೆಯಾಗಿ ಪರಿವರ್ತಿಸಿದ್ದೇವೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ಅವಿರತವಾದ ಶ್ರಮದಿದಂದಾಗಿ ಇಂದು ಈ ವಾರ್ಡ್‌ನಲ್ಲಿ ಇಬ್ಬರು ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದಾರೆ. ಬಸವ ಪಿ ಮೊಗವೀರ ಅವರು ಚುನಾವಣೆಯಲ್ಲಿ ಮೂರು ಬಾರಿ ಸ್ಪರ್ಧಿಸಿ ಎರಡು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ತೀವ್ರ ಪೈಪೋಟಿಯಲ್ಲೇ ಅವರು ಗೆಲುವನ್ನು ಸಾಧಿಸಿ ಮತ್ತೆ ಎರಡನೇ ಬಾರಿ ಗ್ರಾ.ಪಂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪಂಚಾಯತ್‌ರಾಜ್ ವ್ಯವಸ್ಥೆಗಳ ಕುರಿತು ಅಗಾಧ ಜ್ಙಾನ ಹಾಗೂ ತಿಳುವಳಿಕೆ ಹೊಂದಿರುವ ಬಸವ ಪಿ ಮೊಗವೀರ ಅವರು ಅಧ್ಯಕ್ಷರಾಗಿ ಆಯ್ಕೆಯಾಗಬೇಕಿತ್ತು. ಅವರ ಕಡೆಗಣನೆ ಇಡೀ ತೊಪ್ಲು ವಾರ್ಡ್‌ಗೆ ಆಗಿರುವ ಕಡಗಣೆ ಎಂದು ಪ್ರತಿಭನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕಾರಿಣಿ ಸದಸ್ಯ ಮಹೇಶ್ ತೊಪ್ಲು ಮಾತನಾಡಿ ಪಕ್ಷದ ಮುಖಂಡರ ಈ ನಿಲುವುಗಳಿಂದಾಗಿ ಮನನೊಂದು ಕಾರ್ಯಕಾರಿಣಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದರು. ಈ ಸಂದರ್ಭ ಬಿಜೆಪಿಯ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

 

Comments are closed.