ಕರಾವಳಿ

ಸೈಬ್ರಕಟ್ಟೆ ಸಂತೆಯಲ್ಲಿ ಬಾಲ ಕಾರ್ಮಿಕರ ತಡೆ ಕಾಯ್ದೆ ಬಗ್ಗೆ ಅರಿವು: ಪೋಷಕರಿಗೆ ಎಚ್ಚರಿಕೆ

Pinterest LinkedIn Tumblr

ಉಡುಪಿ: ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ತೊಡಗಿಸಿಕೊಳ್ಳಬೇಕು ಹೊರತು ಅವರನ್ನು ಕೆಲಸಕ್ಕೆ ಕಳಿಸುವುದು, ಕೆಲಸ ಮಾಡಿಸುವುದು ತಪ್ಪು ಈ ಬಗ್ಗೆ ಪಾಲಕರು ಕಾನೂನು ಅರಿಯಬೇಕು ಎಂದು ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಮಾಹಿತಿ ನೀಡಿದರು‌.

ಉಡುಪಿ ಜಿಲ್ಲೆಯ ಸೈಬ್ರಕಟ್ಟೆ ಸಂತೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಮಂಗಳವಾರದಂದು ಕಾರ್ಯಾಚರಣೆ ಕೈಗೊಂಡಿದ್ದು ಸಂತೆಯಲ್ಲಿ ಪೋಷಕರೊಂದಿಗೆ ಮಕ್ಕಳು ತರಕಾರಿ ಮತ್ತು ಹಣ್ಣು ವ್ಯಾಪಾರದಲ್ಲಿ ನಿರತಾರಾಗಿರುವವರನ್ನು ಗಮನಿಸಿ ಪೋಷಕರಿಗೆ ಎಚ್ಚರಿಕೆ ನೀಡಿದರು.

ಸಂತೆಯಲ್ಲಿದ್ದ ಬಾಲಕರು ಶಾಲೆಗೆ ಹೋಗುವ ಬಗ್ಗೆ‌ ಆಯಾಯ ಶಾಲೆಯ ಮುಖ್ಯೋಪಾಧ್ಯಾಯರಿಗೆ ಕರೆ ಮಾಡಿ ಖಚಿತ ಪಡಿಸಿಕೊಂಡು ಸಂತೆಗಳಿಗೆ ಮಕ್ಕಳನ್ನು ಕರೆದುಕೊಂಡು ಬರಬಾರದೆಂದು ಎಚ್ಚರಿಸಿ ಮೂವರು ಬಾಲಕರನ್ನು ಅವರ ಪೋಷಕರ ವಶಕ್ಕೆ ನೀಡಲಾಯಿತು. ಶಾಲೆ ಇಲ್ಲದ ಕಾರಣ ಅವರನ್ನು ಕರೆತಂದಿದ್ದೇವೆ ಎಂದು ಪೋಷಕರು ಸಮಜಾಯಿಷಿ ನೀಡಲು ಬಂದಿದ್ದು ಅವರಿಗೆ ಮುಂದೆ ಈ ರೀತಿ ಮಾಡದಂತೆ ಎಚ್ಚರಿಸಲಾಯಿತು.

ಸಂತೆ ಮಾರ್ಕೆಟ್ ನಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ಬಗ್ಗೆ ಮತ್ತು ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ನೆರೆದ ಜನರಿಗೆ ಹಾಗೂ ಸಂತೆಯ ವ್ಯಾಪಾರಸ್ಥರಿಗೆ ಅರಿವು ಮೂಡಿಸಲಾಯಿತು. ಇದೇ ವೇಳೆ ಪ್ರತಿಕ್ರಿಯಿಸಿದ ಪ್ರಭಾಕರ್ ಅಚಾರ್, ಬಾಲ ಕಾರ್ಮಿಕ ಪದ್ಧತಿ ತಡೆ ಬಗ್ಗೆ ಮುಂದಿನ‌ ದಿನದಲ್ಲಿ ಅಲ್ಲಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಲಿದ್ದೇವೆ ಎಂದರು.

ಸಮಾಜ ಕಾರ್ಯಕರ್ತೆ ಸುರಕ್ಷಾ ಈ ಸಂದರ್ಭ ಉಪಸ್ಥಿತರಿದ್ದರು.

Comments are closed.