ಕರಾವಳಿ

ಯುವಪೀಳಿಗೆ ವಿವೇಕಾನಂದರ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಡಿಸಿ ಜಿ.ಜಗದೀಶ್ ಕರೆ

Pinterest LinkedIn Tumblr

ಉಡುಪಿ: ಸ್ವಾಮಿ ವಿವೇಕಾನಂದರು ಯುವಜನತೆಗೆ, ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ತತ್ವಶಾಸ್ತçಕ್ಕೆ, ಶಿಕ್ಷಣಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರವಾದದ್ದು. ವಿವೇಕಾನಂದರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಅವರ ವಿವೇಕವಾಣಿ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಸಂದೇಶವನ್ನು ಯುವಪೀಳಿಗೆ ಅಳವಡಿಸಿಕೊಂಡರೆ, ಯಶಸ್ಸು ಹುಡುಕಿಕೊಂಡು ಬರುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಅವರು ಮಂಗಳವಾರ ಎಮ್.ಜಿ.ಎಮ್, ನ ನೂತನ ರವೀಂದ್ರ ಮಂಟಪದಲ್ಲಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ, ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ, ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದಿನ ಯುವ ಜನತೆ ನಮ್ಮ ಸಂಸ್ಕೃತಿಯನ್ನು ಮರೆಮಾಚುತ್ತಿರುವುದರ ಜೊತೆಗೆ ಪಾಶ್ಚಾತ್ಯ ಸಂಸ್ಕೃತಿಯ ಮೊರೆ ಹೊಗುತ್ತಿದ್ದಾರೆ. ಸಾಮಾಜಿಕ ಜಾಲತಾಣವು ಸೃಜನಶೀಲ ವ್ಯಕ್ತಿತ್ವಕ್ಕೆ ತೊಡಕಾಗುತ್ತದೆ. ಋಣಾತ್ಮಕ ವ್ಯಕ್ತಿತ್ವವನ್ನು ಬೆಳೆಸುತ್ತದೆ. ಆದ್ದರಿಂದ ಯುವಕರು ಉತ್ತಮವಾದ ಗುರಿಯೊಂದಿಗೆ ಸಾಗಬೇಕು, ಕರ್ತವ್ಯದಲ್ಲಿ ಶ್ರೇಷ್ಟತೆಯನ್ನು ಪಡೆಯುವುದೇ ಮೂಲಗುರಿಯಾಗಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಸ್ವಾಮಿ ವಿವೇಕಾನಂದರ ಜಯಂತಿಯು ಇಂದಿನ ಯುವ ಜನರಿಗೆ ಪ್ರೇರಣೆ ಆಗಬೇಕು, ರಾಷ್ಟ್ರ ಪ್ರೇಮ, ದೇಶಭಕ್ತಿ ಮೂಡಿಸುವಂತಹ ಮಾರ್ಗದರ್ಶನವಾಗಬೇಕು ಎಂದರು.
ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಸಂಧ್ಯಾ ಎಸ್ ಪೈ, ಅವರು ಡಾ. ದೇವಿದಾಸ್ ನಾಯ್ಕ ಕೂಜಳಿ ಅವರ ಮೌಲಿಕ ಶಿಕ್ಷಣದ ಕುರಿತಾದ ಅಮೃತ ಬಿಂದು ಕೃತಿಯನ್ನು ಲೋಕಾರ್ಪಣೆ ಮಾಡಿ, ಯುವಕರು ಮೊದಲು ತಮ್ಮನ್ನು ತಾವು ಅರಿತುಕೊಳ್ಳಬೇಕು. ನರೇಂದ್ರನು ವಿವೇಕಾನಂದ ಆಗಿರುವಂತಹ ಮೌಲ್ಯಗಳನ್ನು ತಿಳಿದುಕೊಳ್ಳಬೇಕು. ಮಕ್ಕಳಿಗೆ ಕಲೆ, ಶಿಕ್ಷಣಕ್ಕೆ ಮುಕ್ತ ಅವಕಾಶವನ್ನು ಸರಕಾರ ಮತ್ತು ಪೋಷಕರು ಒದಗಿಸಬೇಕು ಎಂದರು.ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಆಶಯ ನುಡಿ ವ್ಯಕ್ತಪಡಿಸುವುದರ ಮೂಲಕ ಶುಭ ಹಾರೈಸಿದರು.

ಮೌಲಿಕ ಶಿಕ್ಷಣ ಶಿಬಿರದಲ್ಲಿ ಜೈನ್ ಹೈಸ್ಕೂಲ್ ಮುಖ್ಯ ಅಧ್ಯಾಪಕ ಮುನಿರಾಜ್ ರೆಂಜಾಳ, ಪ್ರವಚನಕಾರ ಜಿ ಎಸ್ ನಟೇಶ್, ನಟ ಹಾಗೂ ಲೇಖಕ ಓಂ ಗಣೇಶ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನಗರಾಭಿವೃಧ್ದಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರ ನಾಯಕ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ರೋಷನ್ ಕುಮಾರ್ ಶೆಟ್ಟಿ, ಎಮ್ ಜಿ ಎಮ್ ಕಾಲೇಜು ಪ್ರಾಂಶುಪಾಲ ಡಾ ದೇವಿದಾಸ್ ನಾಯ್ಕ, ಡಾ ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ ಭಾಸ್ಕರ್ ಶೆಟ್ಟಿ, ಉಡುಪಿ ಪದವಿ ಪೂರ್ವ ಕಾಲೇಜಿನ ಪ್ರೊ.ಮಾಲತಿದೇವಿ ಮತ್ತಿತರರು ಉಪಸ್ಥಿತರಿದ್ದರು.

Comments are closed.