ಕುಂದಾಪುರ/ಧಾರವಾಡ: ಧಾರವಾಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಕಲಘಟಗಿಯ ಸರಕಾರಿ ಶಾಲಾ ಮುಖ್ಯ ಶಿಕ್ಷಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಳಾದ ಗುರು, ಲವ, ಹಾಗೂ ಸುದರ್ಶನ್ ಎನ್ನುವರಿಗೆ ಕಲಘಟಗಿಯ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯವು ಜಾಮೀನು ನೀಡಿದೆ.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರಿ ಶಾಲಾ ಮುಖ್ಯ ಶಿಕ್ಷಕ ಶ್ರೀಕಾಂತ ಜಾಲಿಸತಗಿಯವರನ್ನು ಧಾರವಾಡ ಜಿಲ್ಲೆಯ ಕಲಘಟಗಿಯಿಂದ ಅವರು ಬೈಕಿನಲ್ಲಿ ಹೋಗುತ್ತಿದ್ದ ಸಂಧರ್ಭದಲ್ಲಿ ರಸ್ತೆಯಲ್ಲಿ ಅಡ್ಡಗಟ್ಟಿ ಅಪಹರಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಾಂತ್ ಜಾಲಿಸತಗಿಯವರ ಮಗ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳು ಕೋಟದಲ್ಲಿ ಶ್ರೀಕಾಂತ್ ಅವರನ್ನು ಒತ್ತೆಯಿರಿಸಿದ ಬಗ್ಗೆ ಮಾಹಿತಿ ಪಡೆದಿದ್ದು ಕಲಘಟಗಿಯ ವೃತ್ತ ನಿರೀಕ್ಷಕರ ತಂಡ ಕೋಟ ಪೋಲಿಸರೊಂದಿಗೆ ಜಂಟಿಯಾಗಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಶ್ರೀಕಾಂತ್ ಜಾಲಿಸತಗಿಯವರನ್ನು ರಕ್ಷಿಸಲಾಗಿತ್ತು. ಇದೇ ಸಂದರ್ಭ ಆರೋಪಿಗಳಿಂದ ಮಾರಕ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎನ್ನಲಾಗಿದೆ. ಇದೀಗ ಆರೋಪಿಗಳಿಗೆ ಧಾರವಾಡ ಜಿಲ್ಲೆಯ ಕಲಘಟಗಿಯ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಯಾರಿಯವರ ನ್ಯಾಯಾಲಯ ಜಾಮೀನು ನೀಡಿದೆ.
ಆರೋಪಿಗಳ ಪರವಾಗಿ ಕುಂದಾಪುರದ ನ್ಯಾಯವಾದಿ ಶ್ಯಾಮ್ ಸುಂದರ್ ನಾಯರಿ ಹಾಗೂ ಯುವ ನ್ಯಾಯವಾದಿ ನೀಲ್ ಬ್ರಿಯಾನ್ ಪಿರೇರಾರವರು ವಾದಿಸಿದ್ದರು.