ಕರಾವಳಿ

ಅಕ್ರಮಕೂಟ ಸೇರಿಕೊಂಡು ಜೀವ ಬೆದರಿಕೆ ಹಾಕಿದ ಆರೋಪಿಗಳಿಗೆ ದಂಡ..!

Pinterest LinkedIn Tumblr

ಉಡುಪಿ: ಅಕ್ರಮ ಕೂಟ ರಚಿಸಿಕೊಂಡು ಜೀವ ಬೆದರಿಕೆ ಹಾಕಿದ ಆರೋಪಿಗಳಿಗೆ ನಗರದ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ದಂಡ ವಿಧಿಸಿದೆ.

ಉಡುಪಿ ತಾಲೂಕು ಕುಕ್ಕಿಕಟ್ಟೆ ಬಡಗುಬೆಟ್ಟು ಗ್ರಾಮದ ಅರ್ಚನಾ ಮತ್ತು ತೆಂಕನಿಡಿಯೂರು ಗ್ರಾಮ ಈಶ್ವರನಗರದ ಜ್ಯೋತಿ ಇವರು ಜೂನ್ 04, 2014 ರಂದು ಬೆಳಗ್ಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಮನೆ ನಂ: 2-92ಎ ರಲ್ಲಿ ವಾಸವಾಗಿರುವ ದಾಮೋದರ ನಾಯಕ್ ಮತ್ತು ಪವಿತ್ರ ಡಿ ನಾಯಕ್‌ರವರು ಮನೆಗೆ ಬೀಗ ಹಾಕಿ ಹೋದ ಸಂದರ್ಭದಲ್ಲಿ ಮನೆಯ ಬಾಗಿಲಿನ ಬೀಗ ಒಡೆದು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ, ದಾಮೋದರ ನಾಯಕ್ ಮತ್ತು ಪವಿತ್ರ ಡಿ ನಾಯಕ್ ಮನೆಗೆ ಬಂದಾಗ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವ ಕುರಿತು ಪ್ರಕರಣ ದಾಖಲಾಗಿರುತ್ತದೆ.ಈ ಬಗ್ಗೆ ಉಡುಪಿ ನಗರ ಠಾಣೆಯ ಉಪ ನಿರೀಕ್ಷಕಿ ಮೀನಾಕ್ಷಿ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಎಮ್.ಎನ್ ಮಂಜುನಾಥ್‌ರವರು, ಆರೋಪಿತರ ವಿರುದ್ಧದ ಆರೋಪವು ರುಜುವಾತಾಗಿದ್ದು, ಆರೋಪಿಗಳಿಗೆ ಅಪರಾಧ ಎಸಗಲು ಅಕ್ರಮ ಕೂಟ ರಚಿಸಿದ್ದಕ್ಕೆ ತಲಾ 500 ರೂ. ದಂಡ, ತಪ್ಪಿದಲ್ಲಿ 1 ತಿಂಗಳ ಕಾರಾಗೃಹ ಶಿಕ್ಷೆ, ಮನೆಯೊಳಗೆ ಪ್ರವೇಶಿಸದಂತೆ ಅಡ್ಡಗಟ್ಟಿ ತಡೆದುದಕ್ಕೆ ತಲಾ 500 ರೂ. ದಂಡ, ತಪ್ಪಿದಲ್ಲಿ 1 ತಿಂಗಳ ಕಾರಾಗೃಹ ಶಿಕ್ಷೆ, ಅವಾಚ್ಯ ಶಬ್ದಗಳಿಂದ ಬೈದದ್ದಕ್ಕೆ ತಲಾ 500 ರೂ. ದಂಡ, ತಪ್ಪಿದಲ್ಲಿ 1 ತಿಂಗಳ ಕಾರಾಗೃಹ ಶಿಕ್ಷೆ, ಜೀವ ಬೆದರಿಕೆ ಹಾಕಿದ್ದಕ್ಕೆ ತಲಾ 500 ರೂ. ದಂಡ ತಪ್ಪಿದಲ್ಲಿ 1 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ ಕೆ. ರವರು ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

Comments are closed.