ಕರಾವಳಿ

ಮತಯಂತ್ರ ಕೆಟ್ಟಿಲ್ಲ ಬದಲಾಗಿ ಕಾಂಗ್ರೆಸ್ಸಿಗರ ಮನಸ್ಸು ಕೆಟ್ಟಿದೆ: ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಕುಂದಾಪುರ: ಕಾಂಗ್ರೆಸ್ ಸೋತಲ್ಲೆಲ್ಲಾ ಮತ ಯಂತ್ರ ಹಾಳಾಗಿದೆ ಎನ್ನುವ ಆರೋಪಿಸುವ, ಅವರು ಗೆದ್ದ ಕಡೆಯಲ್ಲ ಮತಯಂತ್ರ ಸರಿಯಾಗಿರುತ್ತೆ. ಸಿದ್ಧರಾಮಯ್ಯ ಗೆದ್ದಾಗ ಮತಯಂತ್ರ ಸರಿಯಾಗಿಯೇ ಇರುತ್ತೆ. ಸೋತಾಗ ಮಾತ್ರ ಹಾಳಾಗಿದೆ ಎನ್ನುವ ಆರೋಪಗಳು ಹುಟ್ಟಿಕೊಳ್ಳುತ್ತೆ. ಮತಯಂತ್ರ ಕೆಟ್ಟಿಲ್ಲ, ಆರೋಪಿಸುವವರ ಮನಸ್ಸು ಕೆಟ್ಟಿದೆ ಎಂದು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಅಧ್ಯಕ್ಷರ ಆಯ್ಕೆ ಮಾಡುವಲ್ಲಿ ಯಾವುದೆ ಗೊಂದಲವಿಲ್ಲ. ಸಮಿತಿಗೆ ಅಕಾಂಕ್ಷೆಯಾಗಿ ಬಂದಿದ್ದ ಅಂದಾಜು 150 ಅರ್ಜಿಗಳಲ್ಲಿ 9 ಅರ್ಜಿದಾರರನ್ನು ಆಯ್ಕೆ ಮಾಡಿ ಸಮಿತಿಗೆ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಶೀಘ್ರದಲ್ಲಿಯೇ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಶಿವಮೊಗ್ಗ ಜಿಲ್ಲೆಯ ಶ್ರೀ ಸಿಂಗಧೂರು ದೇವಸ್ಥಾನದಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಿಲ್ಲ. ಈ ಹಿಂದಿನ ಆಡಳಿತ ಮಂಡಳಿಯ ನೇತ್ರತ್ವದಲ್ಲಿ ಹೇಗೆ ದೇವಳದ ಕಾರ್ಯಗಳು ನಡೆಯುತ್ತಿತ್ತೋ ಅದೇ ರೀತಿಯಲ್ಲಿ ಹಿಂದಿನ ಆಡಳಿತ ಮಂಡಳಿಯ ಸುಪರ್ದಿಯಲ್ಲಿಯೇ ದೇವಸ್ಥಾನದ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ಶಾಸಕ ಹರತಾಳು ಹಾಲಪ್ಪ ಹಾಗೂ ಅನೇಕ ಮಠಾಧೀಶರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ದೇವಸ್ಥಾನದ ವಿಚಾರಗಳ ಕುರಿತು ಚರ್ಚೆ ನಡೆಸಿದ್ದು, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯಾವುದೆ ಸಮುದಾಯಕ್ಕೆ ಅಥವಾ ಜಾತಿಯವರ ಮನಸ್ಸಿಗೆ ನೋವಾಗದಂತೆ ದೇವಸ್ಥಾನದ ಅಭಿವೃದ್ಧಿಗೆ ಪೂರಕವಾದ ರೀತಿಯಲ್ಲಿ ಸರ್ಕಾರ ಸ್ಪಂದಿಸಲಿದೆ ಎಂದು ಸಚಿವ ಕೋಟ ತಿಳಿಸಿದರು.

ಕೊರೊನಾ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾದ ’ಸಪ್ತಪದಿ’ ಕಾರ್ಯಕ್ರಮವನ್ನು ಕೋವಿಡ್‌ ನಿಯಮಾವಳಿಗೆ ಪೂರಕವಾಗಿ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು. ಕೋಟೇಶ್ವರ, ಉಪ್ಪುಂದ ಸೇರಿದಂತೆ ರಥೋತ್ಸವ ನಡೆಯುವ ಜಿಲ್ಲೆಯ ದೇವಾಲಯಗಳಲ್ಲಿ ಕೋವಿಡ್‌ ನಿಯಮಾವಳಿಗಳ ಅಡಿಯಲ್ಲಿ ಪಾರಂಪರಿಕ ಉತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಮುಜರಾಯಿ ಇಲಾಖೆಯ ಜಿಲ್ಲಾ ಅಧಿಕಾರಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕೊಡೇರಿ ಹಾಗೂ ಉಪ್ಪುಂದ ಮೀನುಗಾರರ ನಡುವೆ ಅಭಿಪ್ರಾಯ ಬೇಧ ಇರುವ ಹಿನ್ನೆಲೆಯಲ್ಲಿ ಮೀನುಗಾರಿಕಾ ನಿರ್ದೇಶಕ ರಾಮಚಾರಿಯವರನ್ನ ಕಳುಹಿಸಿದ್ದು, ಅವರು ಎರಡು ಕಡೆಯವರ ಅಭಿಪ್ರಾಯವನ್ನು ಪಡೆದುಕೊಂಡಿದ್ದಾರೆ. ಇದೊಂದು ಸೂಕ್ಷ್ಮ ವಿಚಾರವಾಗಿರುವ ಹಿನ್ನೆಲೆಯಲ್ಲಿ ಅವರು ನೀಡುವ ವರದಿಯ ಆಧಾರದಲ್ಲಿ ಜಿಲ್ಲಾಧಿಕಾರಿಯ ನೇತ್ರತ್ವದಲ್ಲಿ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಲಿದೆ.

ಆಂಟಿಜೆನ್‌ ಕಿಟ್‌ ಮೂಲಕ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಒಪ್ಪದೆ ಇರುವ ಕಾರಣದಿಂದ ಲ್ಯಾಬ್‌ ಪರೀಕ್ಷೆಯ ಮೂಲಕವೇ ಕೊರೊನಾ ಪರೀಕ್ಷೆ ನಡೆಯುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಆರೋಗ್ಯ ಇಲಾಖೆಯಡಿಯಲ್ಲಿ ಆಸ್‍ಪತ್ರೆಗಳಲ್ಲಿ ಕೊರೊನಾ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಯಾವುದೆ ಕೇಂದ್ರಗಳಲ್ಲಿ ವ್ಯವಸ್ಥೆಯ ಲೋಪದ ಬಗ್ಗೆ ದೂರು ಬಂದಲ್ಲಿ ಸಮೀಪದ ಅರೋಗ್ಯ ಶಿಬಿರ ಹಾಗೂ ಕೇಂದ್ರಗಳಲ್ಲಿ ಪರೀಕ್ಷೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೋಟ ತಿಳಿಸಿದರು.

ಬೈಂದೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಕರುಣ್‌ ಪೂಜಾರಿ ಮೊದಲಾದವರು ಇದ್ದರು.

Comments are closed.