ಕುಂದಾಪುರ: ದಕ್ಷಿಣ ಭಾರತದ ಪ್ರಮುಖ ಪುಣ್ಯ ಕ್ಷೇತ್ರವಾಗಿರುವ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಯಕ್ಷಗಾನ ಕಲಾವಿದರಿಗೆ ನೀಡಿರುವ ಪ್ರಶಸ್ತಿಯಿಂದಾಗಿ ಅವರಿಗೆ ರಾಜ್ಯ ಪ್ರಶಸ್ತಿ ನೀಡಿದ್ದಕ್ಕಿಂತ ದೊಡ್ಡ ಗೌರವ ಸಂದಿದೆ. ಪಾರಂಪರಿಕ ಕಲೆಯಾದ ಯಕ್ಷಗಾನಕ್ಕೆ ಅದರದ್ದೆ ಆಗಿರುವ ಪರಂಪರೆ ಹಾಗೂ ಹಿನ್ನೆಲೆ ಇದೆ. ಹಿಮ್ಮೇಳ ಹಾಗೂ ಮುಮ್ಮೇಳಗಳ ಮೂಲಕ ಶೋತ್ರಗಳನ್ನು ಸಂಪ್ರೀತಗೊಳಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದ್ದಾರೆ.
ಕೊಲ್ಲೂರಿನ ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ಶನಿವಾರ ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಆಶ್ರಯದಲ್ಲಿ ನಡೆದ 2019 ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಯಕ್ಷಗಾನ ಮೇಳಗಳಿಗೆ ಇರುವ ಪರಿಧಿ ಹಾಗೂ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ನಮ್ಮ ಸಾಂಸ್ಕೃತಿಕ ರಾಯಭಾರಿಗಳಾಗಿರುವ ಯಕ್ಷಗಾನ ಕಲಾವಿದರ ಶ್ರಮ ಹಾಗೂ ಕಲಾರಾಧನೆಗೆ ಸೂಕ್ತ ಗೌರವ ದೊರಕಬೇಕು. ಕಾಲಮಿತಿ ಯಕ್ಷಗಾನ ಪ್ರದರ್ಶನಗಳ ಮೂಲಕ ಹೆಚ್ಚು ಹೆಚ್ಚು ಶೋತ್ರಗಳನ್ನು ಸೆಳೆಯುವಂತಾಗಿ, ಹಿಂದಿನ ದಿನಗಳಲ್ಲಿ ದೀಪದ ಬೆಳಕಿನಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನದ ವೈಭವಗಳು ಮತ್ತೆ ಮರುಕಳಿಸಬೇಕು. ಸಜ್ಜನ ಹಾಗೂ ಸಚ್ಚಾರಿತ್ರ್ಯ ವ್ಯಕ್ತಿತ್ವದ ಅಂಬಾತನಯ ಮುದ್ರಾಡಿಯಂತಹ ಹಿರಿಯ ಸಾಹಿತಿಯನ್ನು ಕೊಲ್ಲೂರು ಕ್ಷೇತ್ರದಲ್ಲಿ ಗೌರವಿಸುವ ಮೂಲಕ ಯಕ್ಷಗಾನ ಅಕಾಡೆಮಿಯ ಗೌರವ ಹೆಚ್ಚಾಗಿದೆ ಎಂದು ಹೇಳಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಅತುಲ್‌ಕುಮಾರ ಶೆಟ್ಟಿ, ಕ್ಷೇತ್ರ ಪುರೋಹಿತ ನರಸಿಂಹ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರಬಾಬು ಬೆಕ್ಕೇರಿ, ರಾಜ್ಯ ಬ್ಯಾರಿ ಅಕಾಡೆಮಿ ರಿಜಿಸ್ತಾರ್ ಪೂರ್ಣಿಮಾ ಆರ್ ಇದ್ದರು.
ಪ್ರಶಸ್ತಿ ಪ್ರದಾನ
ಹಿರಿಯ ಸಾಹಿತಿ ಅಂಬಾತನ ಮುದ್ರಾಡಿ ಅವರಿಗೆ 1 ಲಕ್ಷ ರೂ. ನಗದು ಹಾಗೂ ಫಲಕದೊಂದಿಗೆ 2019 ನೇ ಸಾಲಿನ ’ಪಾರ್ತಿಸುಬ್ಬ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ರಾಮಕೃಷ್ಣ ಗುಂದಿ ಅವರಿಗೆ 50 ಸಾವಿರ ನಗದು ಹಾಗೂ ಫಲಕದೊಂದಿಗೆ 2019 ನೇ ಸಾಲಿನ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ.ನಲ್ಲೂರು ಜನಾರ್ಧನ್ ಆಚಾರ್ಯ ಅವರ ಪರವಾಗಿ ಅವರ ಪತ್ನಿ ಶಾರದಾ ಆಚಾರ್ಯ , ಆರೋ್ಗಡು ಮೋಹನ್‌ದಾಸ್ ಶೆಣೈ, ಮಹಮ್ಮದ್ ಗೌಸ್, ಮೂರೂರು ರಾಮಚಂದ್ರ ಹಗಡೆ, ಎಂ.ಎನ್.ಹೆಗಡೆ ಹಳವಳ್ಳಿ ಹಾಗೂ ಹಾರಾಡಿ ಸರ್ವೋತ್ತಮ ಗಾಣಿಗ ಅವರಿಗೆ ನಗದು 25 ಸಾವಿರ ಹಾಗೂ ಫಲಕದೊಂದಿಗೆ 2019 ನೇ ಸಾಲಿನ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ತಾರ್ ಎಸ್.ಹೆಚ್.ಶಿವರುದ್ರಪ್ಪ ಸ್ವಾಗತಿಸಿದರು. ಸುಷ್ಮಾ, ಸ್ವಾತಿ ಹಾಗೂ ಕಿರ್ತನ ನಾಡಗೀತೆ ಹಾಡಿದರು. 2019–20 ನೇ ಸಾಲಿನಲ್ಲಿ ಅಗಲಿದ ಯಕ್ಷಗಾನ ಕಲಾವಿದರಿಗೆ ಸಂತಾಪ ಸಲ್ಲಿಸಲಾಯಿತು.ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಸಂಚಾಲಕ ಕೆ.ಎಂ.ಶೇಖರ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಹಟ್ಟಿಯಂಗಡಿ ಶ್ರೀ ಕೃಪಾಷೋಷಿತ ಯಕ್ಷಗಾನ ಮಂಡಳಿಯವರಿಂದ ’ಭೀಷ್ಮ ವಿಜಯ’ ಯಕ್ಷಗಾನ ಪ್ರದರ್ಶನ ನಡೆಯಿತು.
Comments are closed.