ಕರಾವಳಿ

ಪತ್ರಕರ್ತರ ಸಂಘದ ಮನವಿಗೆ ಸಚಿವ ಈಶ್ವರಪ್ಪ ಸ್ಪಂದನೆ :ಮಡಪ್ಪಾಡಿ ಗ್ರಾಮದ ಅಭಿವೃದ್ಧಿಗೆ 2 ಕೋಟಿ ರೂ. ಮಂಜೂರು

Pinterest LinkedIn Tumblr

ಮಂಗಳೂರು: ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ್ದ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ 2 ಕೋಟಿ ರೂ. ಮಂಜೂರು ಮಾಡಿದ್ದಾರೆ.

ಗುರುವಾರ ನಗರಕ್ಕೆ ಆಗಮಿಸಿದ ಸಚಿವರನ್ನು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಗ ಭೇಟಿಯಾಗಿ ಮಡಪ್ಪಾಡಿ ಗ್ರಾಮದ ಅಭಿವೃಧಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮನವಿ ಅರ್ಪಿಸಿತು. ಸಂಘದ ಮನವಿಗೆ ಸ್ಪಂದಿಸಿದ ಸಚಿವರು ಸ್ಥಳದಲ್ಲೆೀ ಅನುದಾನ ಮಂಜೂರು ಮಾಡಿದರು.

ಪತ್ರಕರ್ತರ ಸಂಘದ ನಿಯೋಗದಲ್ಲಿ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಕಾರ್ಯಕಾರಿ ಸಮಿತಿ ಸದಸ್ಯರಾದ ಆರ್.ಸಿ.ಭಟ್, ಆತ್ಮಭೂಷಣ್, ಭಾಸ್ಕರ ರೈ ಕಟ್ಟ ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಇದ್ದರು.

10 ಕೋಟಿ ರೂ. ಪ್ಯಾಕೆಜ್ ಬಿಡುಗಡೆಗೆ ಸಿಎಂಗೆ ಮನವಿ :

ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ನಿಯೋಗ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕಂದಾಯ ಸಚಿವ ಆರ್.ಅಶೋಕ್‌ರನ್ನು ಭೇಟಿಯಾಗಿ ಮಡಪ್ಪಾಡಿ ಗ್ರಾಮದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಬಿಡುಗಡೆಗೆ ಒತ್ತಾಯಿಸಿದೆ.

ಸಿಎಂ ಮತ್ತು ಕಂದಾಯ ಸಚಿವರು ಪತ್ರಕರ್ತರ ಮನವಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.

ಮಡಪ್ಪಾಡಿಯಲ್ಲಿ ಕಳೆದ ಜನವರಿ 5ರಂದು ನಡೆದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಗ್ರಾಮಸ್ಥರಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿ ಮಡಪ್ಪಾಡಿ ಗ್ರಾಮದ ಅಭಿವೃದ್ಧಿಗೆ 10 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು.

ಪತ್ರಕರ್ತರ ಗ್ರಾಮ ವಾಸ್ತವ್ಯ ಯೋಜನೆಯಲ್ಲಿ ಪ್ರತಿ ವರ್ಷ ಜಿಲ್ಲೆಯ ಹಿಂದುಳಿದ ಗ್ರಾಮವನ್ನು ಗುರುತಿಸಿ ಆ ಗ್ರಾಮಕ್ಕೆ ಸರಕಾರದ ಯೋಜನೆಯನ್ನು ದೊರಕಿಸಿಕೊಟ್ಟು ಅಭಿವೃದ್ಧಿ ಪಡಿಸುವ ಉ್ದೇಶದಿಂದ 2019-20ನೇ ಸಾಲಿನಲ್ಲಿ ಮಡಪ್ಪಾಡಿ ಗ್ರಾಮವನ್ನು ಆಯ್ಕೆ ಮಾಡಲಾಗಿತ್ತು. 2018-19ನೇ ಸಾಲಿನಲ್ಲಿ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮವನ್ನು ಆಯ್ಕೆ ಮಾಡಿಕೊಂಡು 2018, ಡಿ. 24ರಂದು ಕುತ್ಲೂರು ಸರಕಾರಿ ಶಾಲೆಯಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಕೈಗೊಳ್ಳಲಾಗಿತ್ತು.

ಬಳಿಕ ಆ ಗ್ರಾಮದಲ್ಲಿ ಆನೇಕ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಮುಚ್ಚುವ ಹಂತದಲ್ಲಿದ್ದ ಕುತ್ಲೂರು ಶಾಲೆ ಪತ್ರಕರ್ತರ ಪ್ರಯತ್ನದಿಂದ ಅಭಿವೃದ್ಧಿಯ ಪಥದಲ್ಲಿ ಸಾಗಿದೆ. ಶಾಲೆಯ ಬಹುತೇಕ ಸಮಸ್ಯೆಗಳು ಪರಿಹಾರಗೊಂಡಿವೆ.

ವಿದ್ಯಾರ್ಥಿಗಳ ಸಂಖ್ಯೆ 42ರಿಂದ 82ಕ್ಕೆ ಏರಿಕೆ ಆಗಿದೆ. ಶಾಲೆಗೆ ಕಂಪ್ಯೂಟರ್, ಗ್ರಂಥಾಲಯಕ್ಕೆ ಪೀಠೋಪಕರಣ , ಪುಸ್ತಕಗಳನ್ನು ಒದಗಿಸಲಾಗಿದೆ. ಮಕ್ಕಳಿಗೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ತರಕಾರಿ ಬೆಳೆಯಲು ಕೈತೋಟ ನಿರ್ಮಿಸಿಕೊಡಲಾಗಿದೆ. ದಾನಿಗಳ ನೆರವಿನಿಂದ ಮಕ್ಕಳಿಗೆ ಕಂಪ್ಯೂಟರ್ ಮತ್ತು ಇಂಗ್ಲಿಷ್ ಕಲಿಸಲು ಶಿಕ್ಷಕರ ನೇಮಕ ಮಾಡಿ ಪತ್ರಕರ್ತರ ಸಂಘದ ಮೂಲಕ ವೇತನ ಪಾವತಿಸಲಾಗುತ್ತದೆ.

ಕುತ್ಲೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಕರ್ಯಗಳು ಸರಕಾರದ ಮೂಲಕ ಅನುಷ್ಠಾನಗೊಂಡಿದೆ.ಮಡಪ್ಪಾಡಿ ಗ್ರಾಮವು ಅದೇ ರೀತಿಯಲ್ಲಿ ಅಭಿವೃದ್ಧಿಯಾಗಬೇಕಿದೆ. ಆದುದರಿಂದ ಮಡಪ್ಪಾಡಿ ಗ್ರಾಮದ ಅಭಿವೃದ್ಧಿಗೆ 10 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡುವಂತೆ ಪತ್ರಕರ್ತರ ಸಂಘ ಮನವಿ ಮಾಡಿದೆ.

Comments are closed.