ಉಡುಪಿ: ನ್ಯಾಪ್‌ಟಾಲ್ ಕಂಪನಿಯ ಹೆಸರಿನಲ್ಲಿ ಬಂದ ಸ್ಕ್ರಾಚ್ ಕೂಪನ್ ನಲ್ಲಿ 12 ಲಕ್ಷ ವಿಜೇತರಾಗಿದ್ದೀರಿ ಎನ್ನುವ ಬಹುಮಾನದಾಸೆಗೆ ಬಿದ್ದು ಉಡುಪಿಯ ನಾಗರಾಜ್ ಎನ್ನುವರು 26 ಲಕ್ಷ ಕಳೆದುಕೊಂಡಿದ್ದಾರೆ. ಈ ಬಗ್ಗೆ ಒಂದೂವರೆ ವರ್ಷದ ಬಳಿಕ ಅವರು ಉಡುಪಿ ಸೆನ್ ಠಾಣೆಗೆ ದೂರು ನೀಡಿದ್ದಾರೆ.
ಕಳೆದ ವರ್ಷ (2019) ಮಾರ್ಚ್ ಅಂತ್ಯದಲ್ಲಿ ನಾಗರಾಜ್ ಅವರಿಗೆ ನ್ಯಾಪ್‌ಟಾಲ್ ಕಂಪೆನಿಯ ಹೆಸರಿನಲ್ಲಿ ಒಂದು ಸ್ಕ್ರಾಚ್ ಕೂಪನ್ ಪೋಸ್ಟ್ ಮುಖೇನ ಬಂದಿದ್ದು, ಅದರಲ್ಲಿ 12 ಲಕ್ಷ ವಿಜೇತರಾಗಿದ್ದೀರಿ ಎಂಬುದಾಗಿ ನಮೂದಿಸಲಾಗಿತ್ತು. ಈ ಬಗ್ಗೆ ಪತ್ರದಲ್ಲಿದ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದಾಗ ಹಣವನ್ನು ಪಡೆಯಲು ರಿಜಿಸ್ಟ್ರೇಶನ್ ಚಾರ್ಜ್ ಹಣ ಪಾವತಿಸಲು ತಿಳಿಸಿ ಅವರ ಬ್ಯಾಂಕ್ ಖಾತೆ ವಿವರ ನೀಡಿದ್ದು, ಅದರಂತೆ ನಾಗರಾಜ್ 2019 ಎ.4 ರಂದು 12,000 ರೂ. ಹಣವನ್ನು ಪಾವತಿಸಿದ್ದು ನಂತರದ ದಿನಗಳಲ್ಲಿ ಆರೋಪಿ ಅಮಿತ್ ಬಿಸ್‌ವಾಸ, ಚೇತನ್ ಕುಮಾರ್ ಇವರು ಬೇರೆ ಬೇರೆ ನಂಬ್ರಗಳಿಂದ ಕರೆ ಮಾಡಿ, ತಾವು ನ್ಯಾಪ್‌ಟಾಲ್ ಕಂಪನಿಯಿಂದ ಮಾತನಾಡುವುದು ಎಂದು ನಾಗರಾಜ್ ಅವರನ್ನು ನಂಬಿಸಿದ್ದಾರೆ.
ನಿಮ್ಮ ಹಣವನ್ನು ಪಡೆಯಲು ಜಿ.ಎಸ್.ಟಿ. ಟ್ಯಾಕ್ಸ್, ವೆರಿಫಿಕೇಶ್ ಚಾರ್ಜ್, ಸಬ್ ಚಾರ್ಜ್ ಕಟ್ಟಬೇಕು ಎಂದು ಹೇಳಿ ಎ.4. ರಿಂದ ಜುಲೈ28ರ ಮಧ್ಯವದಿಯಲ್ಲಿ ಇವರಿಂದ ಒಟ್ಟು 26 ಲಕ್ಷದ 47 ಸಾವಿರದ 650 ರೂ. ಹಣವನ್ನು ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮೆ ಮಾಡಿಸಿಕೊಂಡಿದ್ದಾರೆ. ಮಾತ್ರವಲ್ಲದೇ ದೂರುದಾರ ನಾಗರಾಜ್ ಅವರಿಗೆ ವಿಜೇತ ಹಣವನ್ನು ನೀಡದೇ ಪಾವತಿಸಿದ ಹಣವನ್ನೂ ವಾಪಾಸು ನೀಡದೇ ನಂಬಿಸಿ, ಮೋಸ ಮಾಡಿ, ಹಣ ಪಡೆದು ವಂಚಿಸಿದ್ದಾರೆ.
ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.