ಕರಾವಳಿ

ಕೊರೋನಾ ಸ್ವಾಬ್ ಟೆಸ್ಟ್’ಗೆ ‘ಸಂಚಾರಿ ಲ್ಯಾಬ್’ ಕೊಡುಗೆ ನೀಡಿದ ಕುಶಲ ಹೆಗ್ಡೆ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್

Pinterest LinkedIn Tumblr

ಕುಂದಾಪುರ: ಕೊರೊನಾ ನಿರ್ವಹಣೆಯಲ್ಲಿ ಉಡುಪಿ ಜಿಲ್ಲಾಡಳಿತ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಸರಕಾರ ಕೂಡಾ ಹೇಳಿದ್ದು ಜಿಲ್ಲಾಡಳಿತಕ್ಕೆ ಜಿಲ್ಲೆಯ ಜನರ ಸಹಕಾರ ಉತ್ತಮವಾಗಿತ್ತು ಎಂದು ಸಹಾಯಕ ಕಮಿಷನರ್ ಕೆ. ರಾಜು ಹೇಳಿದರು.

ಅವರು ಭಾನುವಾರ ಮಿನಿ ವಿಧಾನಸೌಧ ಆವರಣದಲ್ಲಿ ಗಿಳಿಯಾರು ಕುಶಲ ಹೆಗ್ಡೆ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆರೋಗ್ಯ ಇಲಾಖೆಗೆ ಕೊರೊನಾ ಗಂಟಲು ದ್ರವ ಪರೀಕ್ಷೆಯ ಮಾದರಿ ಸಂಗ್ರಹಕ್ಕಾಗಿ ನೀಡಿದ ಸಂಚಾರಿ ಘಟಕವನ್ನು ಸ್ವೀಕರಿಸಿ ಮಾತನಾಡಿದರು.

ಪಾಸಿಟಿವ್ ಬಂದವರು ಕಡಿಮೆಯಾಗಿ ರಾಜ್ಯದಲ್ಲಿ ಮೊದಲು ಹಸಿರು ವಲಯಕ್ಕೆ ಹೋದ ಜಿಲ್ಲೆ ಉಡುಪಿಯಾಗಿದ್ದು ಮರಣ ಪ್ರಮಾಣ ಕಡಿಮೆ ಇರುವಲ್ಲಿ ರಾಷ್ಟ್ರದಲ್ಲಿಯೇ ಗುರುತಿಸಿಕೊಂಡಿದೆ. ಕನಿಷ್ಟ ಪ್ರಮಾಣದ ಮರಣ ದಾಖಲಾಗಿದ್ದು ಚಿಕಿತ್ಸೆ, ರೋಗ ಪತ್ತೆ ಹಚ್ಚುವಿಕೆ ಸೇರಿದಂತೆ ರೋಗ ಹರಡುವಿಕೆ ತಡೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಮಾದರಿ ಕೆಲಸ ಮಾಡುತ್ತಿದ್ದಾರೆ. ಇದರ ಮಧ್ಯೆಯೂ ಕೆಲವು ವಿಘ್ನ ಸಂತೋಷಿಗಳು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಿರತರಾಗಿದ್ದು ಅಂತಹ ಕೆಲವು ಮಂದಿಯ ಕೇಸು ದಾಖಲಾಗಿದೆ ಎಂದರು.

ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಉದಯ ಹೆಗ್ಡೆ ಅವರು ಸಂಚಾರಿ ಪ್ರಯೋಗಾಲಯವಾಗಿ ಪರಿವರ್ತಿಸಿದ ಮಾರುತಿ ಓಮ್ನಿಯನ್ನು ಹಸ್ತಾಂತರಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ, ಟ್ರಸ್ಟ್‌ನ ಕಿಶೋರ್ ಹೆಗ್ಡೆ, ಸ್ವರೂಪ್ ಹೆಗ್ಡೆ, ಸ್ನೇಹಾ ರೈ, ನ್ಯಾಯವಾದಿ ಜಿ. ಸಂತೋಷ್ ಕುಮಾರ್ ಶೆಟ್ಟಿ, ಜಿ. ನಾರಾಯಣ, ಕೆ.ಕೆ. ರಾಮನ್, ಕಾರ್ಯದರ್ಶಿ ಯು.ಎಸ್. ಶೆಣೈ ಉಪಸ್ಥಿತರಿದ್ದರು.

Comments are closed.