ಕರಾವಳಿ

ಕರಾವಳಿಯಲ್ಲಿ ವರುಣಾಘಾತ- ಸೋಮವಾರದ ಮಂಗಳೂರು ವಿ.ವಿ. ಪದವಿ ಪರೀಕ್ಷೆ ಮುಂದೂಡಿಕೆ

Pinterest LinkedIn Tumblr

ಉಡುಪಿ: ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಕೊಡಗು ಜಿಲ್ಲೆ ಸಹಿತ ಎಲ್ಲೆಡೆ ಭಾರೀ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಎಲ್ಲಾ ಹೊಳೆಗಳು, ನದಿಗಳು ತುಂಬಿ ಹರಿಯುತ್ತಿದೆ. ಹಲವು ಕಡೆಗಳಲ್ಲಿ ಜನವಸತಿ ಪ್ರದೇಶಗಳಲ್ಲಿ ಜಲದಿಗ್ಬಂಧನವಾಗಿದೆ. ಈ ಹಿನ್ನೆಲೆ ನಾಳೆ (ಸೆ.21 ಸೋಮವಾರ) ನಡೆಯಬೇಕಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ.

ಉಭಯ ಜಿಲ್ಲೆಯಲ್ಲಿ ಹಲವು ಭಾಗಗಳು ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಪದವಿ ಅಂತಿಮ ವರ್ಷದ ಪರೀಕ್ಷೆಯನ್ನು ಸರಕಾರ ಮುಂದೂಡಿದೆ. ನಾಳೆ ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಈಗಾಗಲೇ ಕೊರೊನಾ ಕಾರಣದಿಂದಾಗಿ ಪರೀಕ್ಷೆಗೆ ಆರು ತಿಂಗಳು ವಿಳಂಬವಾಗಿತ್ತು. ಇದೀಗ ಮಳೆಯಿಂದಾಗಿ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಬರಲು ಅನಾನುಕೂಲವಾಗುವ ಹಿನ್ನೆಲೆ ಮುಂದೂಡಲಾಗಿದೆ.

ಮಳೆಯಾಗುತ್ತಿರುವುದರಿಂದ ಕಾರ್ಕಳ ತಾಲೂಕಿನ ಮಾಳಘಾಟಿಯಲ್ಲಿ ಗುಡ್ಡ ಕುಸಿತವಾಗಿದೆ. ಕಾರ್ಕಳ ಎಸ್‍ಕೆ ಬಾರ್ಡರ್ ತಿರುವಿನಲ್ಲಿ ಕುಡ್ಡ ಗುಸಿತವಾಗಿದ್ದು, ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಮರಗಳು ಉರುಳಿ ಬಿದ್ದಿದ್ದವು. ನಂತರ ಸಿಬ್ಬಂದಿ ಮರಗಳನ್ನು ಕಡಿದು ತೆರವು ಮಾಡಿದ್ದಾರೆ. ಆದರೆ ಮರಗಳನ್ನು ತೆರವುಗೊಳಿಸಿದ ಕೆಲವೇ ಹೊತ್ತಿನಲ್ಲಿ ಗುಡ್ಡ ಕುಸಿದಿದೆ. ಹೀಗಾಗಿ ಸುಗಮ ಸಂಚಾರಕ್ಕೆ ಸ್ಥಳೀಯರು ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ ಸುಮಾರು ಮೂರು ಗಂಟೆಯಿಂದ ಮಾಳ ಘಾಟಿ ಸಂಪೂರ್ಣ ಮುಚ್ಚಿದೆ.

ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಉಪವಿಭಾಗಾಧಿಕಾರಿ ಕೆ. ರಾಜು, ಪೊಲೀಸ್ ಹಾಗೂ ಅಗ್ನಿಶಾಮಕ ಅಧಿಕಾರಿಗಳು ಪ್ರವಾಹ ಪೀಡಿತ ಸ್ಥಳಗಳಿಗೆ ತೆರಳಿ ರಕ್ಷಣಾ ಕಾರ್ಯ ಹಾಗೂ ಮುಂಜಾಗೃತಾ ಕ್ರಮ ಕೈಗೊಂಡಿದ್ದಾರೆ.

Comments are closed.