ಕರಾವಳಿ

ಬೆಳ್ವೆ, ಹೆಂಗವಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ 19 ಕೋಟಿ ವೆಚ್ಚದ ರಸ್ತೆ, ಸೇತುವೆ ಕಾಮಗಾರಿಗೆ ಸಂಸದೆ ಶೋಭಾ ಕರಂದ್ಲಾಜೆ ಶಂಕುಸ್ಥಾಪನೆ

Pinterest LinkedIn Tumblr

ಕುಂದಾಪುರ: ಕೊರೋನಾ ಹಿನ್ನೆಲೆಯಲ್ಲಿ ಕೆಲವು ಅಭಿವೃದ್ಧಿ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆದರೂ ಕೂಡ ಇತ್ತೀಚೆಗೆ ಆದ್ಯತೆ ಮೇರೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕರ್ನಾಟಕಕ್ಕೆ ಏಳೆಂಟು ವರ್ಷದಿಂದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಣ ಸಿಕ್ಕಿಲ್ಲ. ಹಲವು ಮನವಿಗಳ ಬಳಿಕ ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ 550 ಕೋಟಿ ಹಣ ಬಿಡುಗಡೆಯಾಗಲಿದೆ ಎಂದು ಉಡುಪಿ ಚಿಕ್ಕಮಗಳುರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಬುಧವಾರದಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಬೆಳ್ವೆ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಮಂಜೂರಾದ 4 ಕೋಟಿ 47 ಲಕ್ಷ ವೆಚ್ಚದ ಅಲ್ಬಾಡಿ ಪ್ರೋಪರ್ ಮರೂರು-ಕೊಡಬೈಲು ರಸ್ತೆ, ಹೆಂಗವಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ 8 ಕೋಟಿ 9 ಲಕ್ಷ ವೆಚ್ಚದ ಮರೂರು ಸೇತುವೆ ಅಭಿವೃದ್ಧಿ ಹಾಗೂ 2 ಕೋಟಿ 6 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಗುಡ್ಡೆಯಂಗಡಿ-ಮಾಯಾ ಬಜಾರ್ ಸೇತುವೆ ಅಭಿವೃದ್ಧಿ ಮತ್ತು 4 ಕೋಟಿ 48 ಲಕ್ಷ ವೆಚ್ಚದ ಬಡಬೆಪ್ಡೆ-ಗುಡ್ಡೆಯಂಗಡಿಯಿಂದ ಮಾಯಾಬಜಾರ್ ಮಾರ್ಗವಾಗಿ ಕುಂಟುಹೊಳೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ನಡೆಸಿ ಅವರು ಮಾತನಾಡಿದರು.

 

ದೇಶ ವಿಚಿತ್ರವಾದ ಪರಿಸ್ಥಿಯನ್ನು ಎದುರಿಸುತ್ತಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಲಾಕ್ ಡೌನ್ ಅಂತಹ ಅತ್ಯಂತ ದೃಢ ನಿರ್ಧಾರಗಳನ್ನು ಕೈಗೊಂಡಿದ್ದರಿಂದ ಸೋಂಕು ಹರಡುವುದು ಅತ್ಯಂತ ಕಮ್ಮಿಯಾಗಿದೆ. ಲಾಕ್ಡೌನ್ ಪರಿಣಾಮ ಸಾಮಾಜಿಕ ಅಂತರ, ಮಾಸ್ಕ್ ಮೊದಲಾದ ಆರೋಗ್ಯ ಕಾಳಜಿ ಬರುತ್ತಿರಲಿಲ್ಲ. ಕೊರೋನಾ ಇನ್ನು ಕೆಲವು ತಿಂಗಳು ಇರುವ ಸಾಧ್ಯತೆಗಳಿದ್ದು ಆರೋಗ್ಯ ಜಾಗೃತಿ ಅಗತ್ಯವಾಗಿ ಬೇಕು. ಬೇರೆಬೇರೆ ದೇಶಗಳಿಗೆ ಔಷಧಿಗಳನ್ನು ರಫ್ತು ಮಾಡಲಾಗಿದೆ. ದೇಶದಲ್ಲಿ ನಾಲ್ಕು ವೈರಾಲಜಿ ಲ್ಯಾಬ್ ಇದ್ದು ಕೊರೋನಾ ಬಳಿಕ ಪರೀಕ್ಷೆಗಾಗಿ ದೇಶದಲ್ಲಿ ಎರಡು ಸಾವಿರಕ್ಕೂ ಅಧಿಕ ಲ್ಯಾಬ್ ತೆರೆಯಲಾಗಿದೆ. ಜಿಲ್ಲೆ ಹಾಗೂ ರಾಜ್ಯದಲ್ಲಿ ವೆಂಟಿಲೇಟರ್ ಸಹಿತ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಜೀವದ ಹಂಗು ತೊರೆದು ಕೊರೋನಾ ವಾರಿಯರ್ಸ್ ಸೇವೆ ಸಲ್ಲಿಸಿದ್ದರಿಂದ ದೇಶದಲ್ಲಿ ಸಾವಿನ ಸಂಖ್ಯೆ ಕಡಿಮೆಗೊಳಿಸಲು ಸಾಧ್ಯವಾಯಿತು ಎಂದರು.

ಇದೇ ಸಂದರ್ಭ ಅರಸಮ್ಮನಕಾನು ದೇವಸ್ಥಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹೆಬ್ರಿ ತಾಲೂಕು ಪಂಚಾಯತ್ ಅಧ್ಯಕ್ಷ ರಮೇಶ್ ಪೂಜಾರಿ ಶಿವಪುರ, ಉಪಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಸೂರ್ಗೋಳಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯೆ ಸುಪ್ರೀತಾ ಉದಯ್ ಕುಲಾಲ್, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ಬಿಜೆಪಿ ಮುಖಂಡರಾದ ಸತೀಶ್ ಹೆಗ್ಡೆ, ಸದಾನಂದ ಪೂಜಾರಿ ಚೇರ್ಕಳ, ಮೇರಿ ಸಾಝನ್, ಜ್ಯೋತಿ ಸೀತಾರಾಮ ಪೂಜಾರಿ, ಉಷಾ ಪ್ರಕಾಶ್ ಶೆಟ್ಟಿ, ಸದಾನಂದ ಪೂಜಾರಿ, ಉಮೇಶ್ ಶೆಟ್ಟಿ ಇದ್ದರು. ಮರೂರು ಕಾರ್ಯಕ್ರಮದಲ್ಲಿ ಅಮಾಸೆಬೈಲು ತಾ.ಪಂ ಸದಸ್ಯೆ ಜ್ಯೋತಿ ಪೂಜಾರಿ, ಬಿಜೆಪಿ ಮುಖಂಡರಾದ ಟಿ. ರಘುರಾಮ್ ಶೆಟ್ಟಿ, ಗಣಪು ನಾಯಕ ಮರೂರು, ಯೋಗೀಶ್ ಮಡಿವಾಳ ಹೆಂಗವಳ್ಳಿ, ಚಂದ್ರಶೇಖರ್ ಶೆಟ್ಟಿ ಮಟ್ನಗದ್ದೆ, ರಾಘವೇಂದ್ರ ಪೂಜಾರಿ ತೊಂಬತ್ತು, ಸುಖೇಶ್ ಮರೂರು, ಶ್ವೇತಾ ಮಂಜುನಾಥ ಪೂಜಾರಿ, ಮಾಜಿ ತಾ.ಪಂ ಅಧ್ಯಕ್ಷ ದೀಪಿಕಾ ಶೆಟ್ಟಿ ಉಡುಪಿ ಜಿಲ್ಲಾ ಬಿಜೆಪಿ ಹಾಗೂ ಕುಂದಾಪುರ ಕ್ಷೇತ್ರ ಬಿಜೆಪಿಯ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಗಣೇಶ್ ಅರಸಮ್ಮನಕಾನು ನಿರೂಪಿಸಿ ವಂದಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.