ಕುಂದಾಪುರ: ಬೈಂದೂರು ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದ್ದು, ಅವುಗಳಲ್ಲಿ ಹಲವಕ್ಕೆ ಅನುದಾನ ಮಂಜೂರಾಗಿ ಕಾಮಗಾರಿ ಆರಂಭವಾಗಿದೆ. ಇನ್ನು ಕೆಲವು ಟೆಂಡರ್ ಪ್ರಕ್ರಿಯೆ ನಡೆಯುತ್ತಿವೆ. ಇವುಗಳ ಅನುಷ್ಠಾನದೊಂದಿಗೆ ಕ್ಷೇತ್ರದ ಚಿತ್ರ ಬದಲಾಗಲಿದೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.
ಮಂಗಳವಾರ ಬೈಂದೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರಮುಖ ಯೋಜನೆಗಳ ವಿವರ ನೀಡಿದರು.

ಬೈಂದೂರು ಪಟ್ಟಣ ಪಂಚಾಯಿತಿ ಘೋಷಣೆ ಆಗಿದೆ. ಯಡ್ತರೆಯಲ್ಲಿ ರೂ ೧೦ ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ರಚನೆಯಾಗಲಿದೆ. ನ್ಯಾಯಾಲಯ, ತಾಲ್ಲೂಕು ಪಂಚಾಯಿತಿ ಕಚೇರಿ ನಿರ್ಮಾಣ, ಭೂ ನ್ಯಾಯ ಮಂಡಳಿ, ಆಹಾರ ಶಾಖೆ ಆರಂಭ, ಬಸ್ ನಿಲ್ದಾಣ, ಸರ್ಕಾರಿ ಐಟಿಐ ಕಾಲೇಜು ಅಭಿವೃದ್ಧಿ, ವಿಶಾಲ ಒಳ, ಹೊರ ಕ್ರೀಡಾಂಗಣ, ೧೦೦ ಹಾಸಿಗೆಗಳ ಸರ್ಕಾರಿ ಆಸ್ಪತ್ರೆ, ಡಯಾಲಿಸಿಸ್ ಸೌಲಭ್ಯ, ಕೊಲ್ಲೂರಿನಲ್ಲಿ ನೂತನ ಗೋಶಾಲೆ, ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಮಾನ್ಯ ಸಂಸದರೊಂದಿಗೆ ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರ ಮಂಜೂರಾತಿ ಸಿಗಲಿದೆ. ಅಗ್ನಿಶಾಮಕ ಠಾಣೆ ಈಗಾಗಲೇ ಮಂಜೂರಾಗಿದ್ದು ರೂ ೧೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಉಡುಪಿ ಜಿಲ್ಲೆಯ ಪ್ರವಾಸೋದ್ಯಮದ ದಿಕ್ಕು ಬದಲಿಸಬಲ್ಲ ಕೊಲ್ಲೂರು-ಕೊಡಚಾದ್ರಿ ಕೇಬಲ್‌ಕಾರ್ ಯೋಜನೆ ಬಗ್ಗೆ ಈಗಾಗಲೇ ಸಂಸದರೊಂದಿಗೆ ಚರ್ಚಿಸಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಅದು ಕಾರ್ಯಗತಗೊಳ್ಳಲಿದೆ ಎಂದು ಅವರು ಹೇಳಿದರು.
ನಬಾರ್ಡ್ ಯೊಜನೆಯಡಿ ಕ್ಷೇತ್ರದ ಪ್ರತಿ ಮನೆಗೆ ಕುಡಿಯುವ ನೀರು ಪೂರೈಕೆ ಯೋಜನೆಗೆ ರೂ ೨೨೦ ಕೋಟಿ, ಎಂಟು ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಸೌಕೂರು ಏತ ನೀರಾವರಿಗೆ ರೂ ೭೩ ಕೋಟಿ, ಸುಮನಾವತಿ ನದಿಗೆ ಸುಬ್ಬರಡಿಯಲ್ಲಿ ರೂ ೩೫ ಕೋಟಿ ವೆಚ್ಚದಲ್ಲಿ ಕುಡಿಯುವ ನೀರು, ಕೃಷಿ ಉದ್ದೇಶದ ಕಿಂಡಿ ಅಣೆಕಟ್ಟು ರಚನೆ, ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ ರೂ ೧೦೨ ಕೋಟಿ ವೆಚ್ಚದ ಬಹುಪಯೋಗಿ ಕಿಂಡಿ ಅಣೆಕಟ್ಟುಗಳ ರಚನೆ ಆಗಲಿವೆ. ಮೀನುಗಾರಿಕೆ ಅಭಿವೃದ್ಧಿ ಯೋಜನೆಯಡಿ ಮರವಂತೆ, ಗಂಗೊಳ್ಳಿ ಮತ್ತು ಕೊಡೇರಿ ಬಂದರು ಅಭಿವೃದ್ಧಿಗೆ ಒಟ್ಟು ರೂ ೯೩.೮೦ ಕೋಟಿ ಅನುದಾನ ಬಿಡುಗಡೆಯಾಗಿದೆ. ರೂ. ೩ ಕೋಟಿ ವೆಚ್ಚದಲ್ಲಿ ಸಿದ್ದಾಪುರ ಸರ್ಕಲ್ ನಿರ್ಮಾಣ, ರೂ ೫ ಕೋಟಿ ವೆಚ್ಚದಲ್ಲಿ ಸೌಕೂರು ಮತ್ತು ಕೊಲ್ಲೂರು ದೇವಸ್ಥಾನ ಪ್ರದೇಶದ ಅಭಿವೃದ್ಧಿ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಮರವಂತೆ ಮತ್ತು ಸೋಮೇಶ್ವರ ಬೀಚ್ ಅಭಿವೃದ್ಧಿಗೆ ರೂ. ೧೦ ಕೋಟಿ ಬಿಡುಗಡೆಯಾಗಿದೆ. ವಾರಾಹಿ ಯೋಜನೆ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ, ಪಿ.ಎಮ್.ಜಿ.ಎಸ್.ವೈ. ಮೀನುಗಾರಿಕಾ ರಸ್ತೆ ಯೋಜನೆಗಳಡಿ ಹತ್ತಾರು ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ ರೂ ೨೦ ಕೋಟಿ ರೂ. ಮೊತ್ತದ ಹೆಮ್ಮಾಡಿ-ನೆಂಪುವರೆಗಿನ ರಸ್ತೆ ದ್ವಿಪಥ ಕಾಮಗಾರಿ ಪ್ರಗತಿಯಲ್ಲಿದೆ. ಹೆರಂಜಾಲು ವಸತಿ ಶಾಲೆ ಸಿಬ್ಬಂದಿ ವಸತಿ ಗೃಹ, ಬೈಂದೂರು ವಿದ್ಯಾರ್ಥಿ ನಿಲಯದ ನಿರ್ಮಾಣ, ನಾಲ್ಕು ಅಂಬೇಡ್ಕರ್ ಭವನ ಮತ್ತು ಒಂದು ಜಗಜ್ಜೀವನ್ ರಾಮ್ ಭವನ ನಿರ್ಮಾಣವೂ ಶೀಘ್ರ ಆರಂಭವಾಗಲಿದೆ. ಕೊಲ್ಲೂರಿನಲ್ಲಿ ರೂ ೧೦ ಕೋಟಿ ವೆಚ್ಚದ ೩೩/೧೧ ಕೆ.ವಿ. ವಿದ್ಯುತ್ ಕೇಂದ್ರ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಒಪ್ಪಿಗೆ ಪಡೆದಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ವಿವರಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುರೇಶ ಬಟವಾಡಿ, ಶೋಭಾ ಪುತ್ರನ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮಾಲಿನಿ ಕೆ, ಬಿ.ಜೆ.ಪಿ ವಲಯಾಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿಬಾಲಚಂದ್ರ ಭಟ್, ಪ್ರಕಾಶ ಪೂಜಾರಿ ಇದ್ದರು.
Comments are closed.