ಕರಾವಳಿ

ಕೆರೆಯಾಗುವ ಹೆದ್ದಾರಿ; ಪರಿಹಾರಕ್ಕೆ 4 ಗಂಟೆ ರಾ.ಹೆದ್ದಾರಿಯಲ್ಲೇ ಬಳಿಯಲ್ಲಿದ್ದು ಕುಂದಾಪುರ ಶಾಸಕ ಹಾಲಾಡಿ ಮಾರ್ಗದರ್ಶನ

Pinterest LinkedIn Tumblr

ಕುಂದಾಪುರ: ಕಳೆದ ಕೆಲ ದಿನಗಳಿಂದ ಬಸ್ರೂರು ಮೂರುಕೈ ಯಿಂದ ವಿನಾಯಕ ವರೆಗಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿನ ಸರ್ವೀಸ್ ರಸ್ತೆಯಲ್ಲಿನ ಮಳೆ ನೀರು ಅವಾಂತರ ನಿವಾರಣೆಗೆ ಮುಂದಾದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಸೋಮವಾರ ಬೆಳಿಗ್ಗೆಯಿಂದ ತಾವೇ ಖುದ್ದಾಗಿ ನಿಂತು ಪರಿಹಾರ ಕಾಮಗಾರಿಗೆ ಮಾರ್ಗದರ್ಶನ ಮಾಡಿದ ಘಟನೆ ನಡೆದಿದೆ.

ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹಾಗೂ ಸರ್ವೀಸ್ ರಸ್ತೆಗಳ ಅವ್ಯವಸ್ಥಿತ ಹಾಗೂ ಅತಾಂತ್ರಿಕ ನಿರ್ವಹಣೆಯಿಂದಾಗಿ ನಗರದ ಸಂಗಮ್ ಜಂಕ್ಷನ್ ನಿಂದ ವಿನಾಯಕ ವರೆಗೆ ಎಲ್ಲೆಂದರಲ್ಲಿ ಮಳೆ ನೀರು ನಿಂತು ಸಮಸ್ಯೆ ಸೃಷ್ಟಿಯಾಗುತ್ತಿದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ಶಾಸಕರು, ಸಚಿವರು, ಸಂಸದರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲು ಅಧಿಕಾರಿಗಳ ಮೂಲಕ ಸಂಬಂಧಿಸಿದವರಿಗೆ ನಿರ್ದೇಶನವನ್ನು ನೀಡಿದ್ದರು.

ಕೆಲ ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಬಸ್ರೂರು ಮೂರುಕೈ ಯಿಂದ ವಿನಾಯಕ ವರೆಗಿನ ಸರ್ವೀಸ್ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಡಕಾಗುತ್ತಿರುವುದರಿಂದಾಗಿ ಪದೆ ಪದೆ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯಲ್ಲಿ ಕಿ. ಮೀ ದೂರದವರೆಗೆ ವಾಹನ ಜಾಮ್ ಆಗುತ್ತಿದ್ದು, ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು.

ಸೋಮವಾರ ಬೆಳಿಗ್ಗೆ ಸಮಸ್ಯೆ ನಿವಾರಣೆಗೆ ಖುದ್ದು ಮುಂದಾದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ನೀರು ನಿಂತು ಸಮಸ್ಯೆಯನ್ನು ಉಂಟು ಮಾಡುತ್ತಿದ್ದ ಪ್ರದೇಶಗಳಲ್ಲಿ ನೀರಿನ ಸುಗಮ ಹರಿಯುವಿಕೆಗೆ ಅಗತ್ಯವಾಗಿರುವ ಕಾಮಗಾರಿಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಆರಂಭಿಸಿದ್ದಾರೆ. ಜೆಸಿಬಿ ಯಂತ್ರದ ಮೂಲಕ ಮಣ್ಣು ತೆಗೆಸುವ ಕಾರ್ಯ ನಡೆದಿದೆ. ನೀರಿನ ಸುಗಮ ಹರಿಯುವಿಕೆಗೆ ಅಗತ್ಯವಾಗಿರುವ ಪೈಪ್ ಅಳವಡಿಕೆಯ ಕೆಲಸ ನಡೆಯುತ್ತಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸಾಕಷ್ಟು ಹೊತ್ತು ಉಪಸ್ಥಿತರಿದ್ದ ಶಾಸಕ ಹಾಲಾಡಿ ಕಾಮಗಾರಿ ನಿರ್ವಹಣೆಗೆ ಸ್ವತ: ಸಲಹೆ, ಸೂಚನೆ ನೀಡಿದರು.

ಕುಂದಾಪುರ ಪೊಲೀಸ್ ಉಪ ವಿಭಾಗದ ಎಎಸ್ ಪಿ ಹರಿರಾಂ ಶಂಕರ್, ತಹಶೀಲ್ದಾರ್ ಆನಂದಪ್ಪ, ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ, ಪಿಎಸೈ ಹರೀಶ್ ಆರ್., ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪ್ರಮುಖರಾದ ಮಂಜು ಬಿಲ್ಲವ, ಸದಾನಂದ ಬಳ್ಕೂರು, ಅವಿನಾಶ್ ಉಳ್ತೂರು, ದಿವಾಕರ ಪೂಜಾರಿ ಕಡ್ಗಿಮನೆ, ಸುನೀಲ್ ಶೆಟ್ಟಿ ಹೇರಿಕುದ್ರು, ವಿನೋದ ಕುಂದಾಪುರ, ಮಹೇಶ್ ಶೆಣೈ ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.