ಕರಾವಳಿ

ಕುಲಾಲ ಸಮಾಜದ ಹಿರಿಯ ಮುತ್ಸದ್ದಿ ಆರ್.ಎಂ.ಮಡ್ವ ವಿಧಿವಶ

Pinterest LinkedIn Tumblr

ಮುಂಬಾಯಿ : ಕರ್ನಾಟಕದ ಗಡಿ ಭಾಗದಲ್ಲಿರುವ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕೊಡ್ಲಾಮೋಗೇರು ಮಡ್ವ ಮನೆಯ ರಾಮಯ್ಯ ಮೂಲ್ಯ(ಆರ್.ಎಂ ಮಡ್ವ) ರವರು ಜೂನ್ ಒಂದರಂದು ಸೂರ್ಯೋದಯದ ವೇಳೆ ದೈವದೀನರಾದರು.

85ವರ್ಷದ ತುಂಬು ಜೀವನ ಜೀವಿಸಿದ ಇವರು,ಪ್ರತಿಷ್ಠಿತ ಕುಲಾಲ ಸಮಾಜದ ಹಿರಿಯ ಮುಂದಾಳುವಾಗಿ, ಈ ಕರ್ಮಭೂಮಿಯಲ್ಲಿ ಎಲ್ಲ ಕಡೆ ಹಂಚಿ ಹರಿದು ಹೋಗಿದ್ದ ತನ್ನ ಕುಲಭಾಂದವರನ್ನೆಲ್ಲಾ ಒಂದೆಡೆ ಸೇರಿಸಿ, ಅವರನ್ನು ಸಂಘಟಿತರನ್ನಾಗಿ ಮಾಡುವ ತನ್ಮೂಲಕ, ಮುಂಬೈ ನಗರದಲ್ಲಿ “ಕುಲಾಲ ಸಂಘದ” ಅವಿರತ ಸೇವೆ ಮಾಡಿದವರು.

ಸಂಘದ ದಲ್ಲಿ ವಿವಿಧ ಪದವಿಗಳನ್ನು ಅಲಂಕರಿಸಿ ಬಳಿಕ ಅಧ್ಯಕ್ಷರಾಗಿ,ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಮನದಲ್ಲಿ ಯಾವತ್ತೂ ನೆನಪುಳಿಯುವ ಕಾರ್ಯವನ್ನು ಮಾಡಿ, ಆ ಸಮಾಜದ ಏಳ್ಗೆಯ ಹರಿಕಾರ ಅನ್ನಿಸಿಕೊಂಡವರಿವರು.

ಜೀವನದ ಗೆಲುವಿಗಾಗಿ ಅವರು ತಾಯ್ನಾಡನ್ನು ಬಿಟ್ಟು ಈ ಮಾಯಾನಗರಿಗೆ ಬಂದು, ನಗರದ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಉನ್ನತ ಅಧಿಕಾರಿಯಾಗಿ ,ಭಾರತೀಯ ಜೀವವಿಮಾ ನಿಗಮದ ಏಜೆಂಟ್ ಆಗಿ, ಕಾಯಕ ಯೋಗಿ ಎನಿಸಿಕೊಂಡವರು ಶ್ರೀ ಆರ್ ಎಂ ಮಡ್ವರವರು..

ಕುಲಾಲ ಸಮಾಜ ಆರ್ಥಿಕವಾಗಿ ಪ್ರಬಲವಾಗಬೇಕು,ಎಲ್ಲರೂ ಸ್ವಾವಲಂಬಿಗಳಾಗಿ ಬದುಕಬೇಕು ಅನ್ನುವ ಉದ್ದೇಶದಿಂದ ಜ್ಯೋತಿ ಕೋ.ಆಪರೇಟಿವ್ ಸೊಸೈಟಿಯ ಸ್ಥಾಪನೆಯಲ್ಲಿ ಇವರು ಒಬ್ಬರಾದರು, ಈ ಸಂಸ್ಥೆಯ ಅಭಿವೃದ್ಧಿಗೆ ಬದುಕಿನ ಬಹಳಷ್ಟು ಸಮಯಗಳನ್ನು ನೀಡಿದರು. ಇಲ್ಲಿ ವಿವಿಧ ಹುದ್ದೆಗಳನ್ನು ಜವಾಬ್ದಾರಿಯಿಂದ ನಿಭಾಯಿಸಿ ಬಳಿಕ ಕಾರ್ಯದಕ್ಷರಾಗಿ ತುಂಬಾ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಸಮಾಜದ ಆರ್ಥಿಕ ಬಲವರ್ಧನೆಗೆ ಅವಿರತ ಪ್ರಯತ್ನ ಪಟ್ಟ ದೂರದೃಷ್ಟಿಯ ನಾಯಕರಿವರು.

ತನ್ನ ಜೀವಿತಾವಧಿಯ ಕೊನೆಯ ಗಳಿಗೆವರೆಗೂ ಸಮಾಜಕ್ಕಾಗಿ ಬದುಕಿದ ಸಾರ್ಥಕ ಬದುಕು ಶ್ರೀಯುತರದ್ದು. ಎಲ್ಲರ ನೋವು ನಲಿವುಗಳಲ್ಲಿ ಭಾಗಿಯಾಗಿ ಕಷ್ಟದಲ್ಲಿರುವವರಿಗೆ ಶಕ್ತಿ ಮೀರಿ ಸಹಾಯ ಹಸ್ತ ಚಾಚಿ ಅವರ ಕಣ್ಣೀರನ್ನು ಒರೆಸುವ ಮನೆಯ ಹಿರಿಯ ಮಗನಂತೆ ಇದ್ದವರಿವರು. ಕುಲಾಲ ಸಂಘ ಪ್ರಾರಂಭದ ದಿನಗಳಲ್ಲಿ ದೀಪಾವಳಿ,ದಸರಾ ಮೊದಲಾದ ಉತ್ಸವದ ಸಂದರ್ಭದಲ್ಲಿ ಸಂಘಕ್ಕಾಗಿ ದೇಣಿಗೆಯ ಸಂಗ್ರಹಣೆಗೆ ಶ್ರಮ ವಹಿಸಿದವರು..

ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಲೇ ಇಷ್ಟು ವರ್ಷ ಸಾರ್ಥಕ ಬದುಕನ್ನು ಸಾಗಿಸಿದ ಇವರು ಪತ್ನಿ,ಇಬ್ಬರು ಪುತ್ರಿಯರು,ಅಳಿಯಂದಿರು,ಮೊಮ್ಮಕ್ಕಳು,ಹಾಗೂ ಅಪಾರ ಬಂಧು ಮಿತ್ರರು ಹಿತೈಷಿಗಳನ್ನು ಅಗಲಿದ್ದಾರೆ.ಇವರ ನಿದಾನಕ್ಕೆ ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್ ಹಾಗೂ ಪದಾಧಿಕಾರಿಗಳು ಸರ್ವ ಸದಸ್ಯರು. ಜ್ಯೋತಿ ಕೋಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಧ್ಯಕ್ಷ ಗಿರೀಶ್ ಸಾಲ್ಯಾನ್ ಮತ್ತು ಆಡಳಿತ ಮಂಡಳಿ. ಸಿಬ್ಬಂದಿ ವರ್ಗ. ಕಂಬನಿ ಮಿಡಿದಿದ್ದಾರೆ.

ವರದಿ : ಈಶ್ವರ ಎಂ. ಐಲ್ / ದಿನೇಶ್ ಕುಲಾಲ್ ಮುಂಬೈ

Comments are closed.