ಕರಾವಳಿ

ಉಡುಪಿಯ ಸ್ವರ್ಣಾ ನದಿಗೆ ಬ್ಯಾರೇಜ್ ನಿರ್ಮಾಣ- ಸ್ಥಳ ಪರಿಶೀಲಿಸಿದ ಶಾಸಕ ರಘುಪತಿ ಭಟ್

Pinterest LinkedIn Tumblr

ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಹರಿಯುತ್ತಿರುವ ಸ್ವರ್ಣಾ ನದಿಗೆ 3 ಕಡೆ ಬ್ಯಾರೇಜ್ ನಿರ್ಮಿಸಿ ಉಪ್ಪು ನೀರನ್ನು ತಡೆಗಟ್ಟುವ ಜತೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಇಲಾಖಾ ಅಧಿಕಾರಿಗಳೊಂದಿಗೆ ಉಡುಪಿ ಶಾಸಕ ಕೆ. ರಘುಪತಿ ಭಟ್ ಭಾನುವಾರ ಸ್ಥಳ ಪರಿಶೀಲನೆ ಮಾಡಿದರು.

ಈ ಯೋಜನೆಯಲ್ಲಿ ಸ್ವರ್ಣಾ ನದಿಗೆ ಕಲ್ಯಾಣಪುರ ಸೇತುವೆ ಬಳಿ ನಯಂಪಳ್ಳಿ ಎಂಬಲ್ಲಿ ಬ್ಯಾರೇಜ್ ನಿರ್ಮಿಸಿ ಉಪ್ಪು ನೀರನ್ನು ತಡೆಗಟ್ಟುವುದು, ನಂತರ ಪೆರಂಪಳ್ಳಿ ಹಾಗೂ ಕೀಳಿಂಜೆ ಎಂಬಲ್ಲಿ ಬ್ಯಾರೇಜ್ ನಿರ್ಮಿಸಿ ನೀರನ್ನು ಸಂಗ್ರಹಿಸುವುದು. ಇದರಿಂದಾಗಿ ಅಂತರ್ಜಲ ವೃದ್ಧಿಸುವ ಜತೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಬೇಕಾದಷ್ಟು ನೀರನ್ನು ಒದಗಿಸಬಹುದಾಗಿದೆ.

ಅಂದಾಜು ರೂ. 300 ಕೋಟಿ ವೆಚ್ಚದ ಈ ಯೋಜನೆಗೆ ಈಗಾಗಲೇ ಡಿಪಿಆರ್ ತಯಾರಿಸಲು ಸರ್ಕಾರದಿಂದ ಆದೇಶ ಆಗಿರುವ ಹಿನ್ನೆಲೆಯಲ್ಲಿ ಸರ್ವೆ ಕಾರ್ಯ ನಡೆಸಲು ಕನ್ಸಲ್ಟೆನ್ಸಿ ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ಸೂಕ್ತ ಸ್ಥಳ ಪರಿಶೀಲನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಮತ್ತು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶೇಷ ಕೃಷ್ಣ ಹಾಗೂ ವರಾಹಿ ಯೋಜನೆಯ ಸಹಾಯಕ ಇಂಜಿನಿಯರ್ ಪ್ರೀತಮ್ ಉಪಸ್ಥಿತರಿದ್ದರು.

Comments are closed.