ಕರಾವಳಿ

ಉತ್ತರ ಕನ್ನಡ; ಕೊರೋನಾ ಸೋಂಕು ಮುಕ್ತ ಎನ್ನುತ್ತಿರುವಾಗಲೇ ಮತ್ತೊಂದು ಸೋಂಕು ಪತ್ತೆ

Pinterest LinkedIn Tumblr


ಕಾರವಾರ(ಮೇ.05): ಉತ್ತರ ಕನ್ನಡ ಜಿಲ್ಲೆ ಕೊರೋನಾ ಸೋಂಕು ಮುಕ್ತ ಎನ್ನುತ್ತಿರುವಾಗಲೇ ಮತ್ತೊಂದು ಸೋಂಕು ಪತ್ತೆ ಆಗಿದ್ದು, ನೆಮ್ಮದಿಯ ನಿಟ್ಟುಸಿರು ಬಿಟ್ಟ ಜಿಲ್ಲೆಯ ಜನರಲ್ಲಿ ಆತಂಕದ ಛಾಯೆ ಮೂಡಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 20 ದಿನದ ಬಳಿಕ ಕೊರೋನಾ ಪಾಸಿಟಿವ್ ಪತ್ತೆ ಆಗಿದೆ. 11 ಕೊರೋನಾ ಸೋಂಕಿತರು ಗುಣಮುಖರಾಗಿ ತಮ್ಮ ತಮ್ಮ ಗೂಡು ಸೇರಿದರು. ಇನ್ನೇನು ಮತ್ತೆ ಜಿಲ್ಲೆಯಲ್ಲಿ ಕೊರೋನಾ ಸೋಂಕು ಬರಲ್ಲ ಎಂದು ಜಿಲ್ಲೆಯ ಜನ‌ ನಂಬಿದರು. ಆದರೆ, ಅವೆಲ್ಲ ನಂಬಿಕೆ ಹುಸಿ ಆಗಿದೆ.

ಕಳೆದ ಒಂದುವರೆ ತಿಂಗಳಲ್ಲಿ 11 ಕೊರೋನಾ ಸೋಂಕಿತರು ಗುಣಮುಖರಾಗಿದ್ದು, ಈ ಪೈಕಿ ಕೊನೆಯ ಸೋಂಕಿತ ಏಪ್ರೀಲ್ 29 ರಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು. ಬಳಿಕ ಉತ್ತರ ಕನ್ನಡ ಜಿಲ್ಲೆ ಕೊರೋನಾ ಮುಕ್ತ ಆಯ್ತು ಎನ್ನುವಾಗಲೆ ಇವತ್ತು ಭಟ್ಕಳದಲ್ಲೆ 18ವರ್ಷದ ಯುವತಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಮತ್ತೆ ಜಿಲ್ಲೆಯ ಜನರ ನೆಮ್ಮದಿ ಕೆಡಿಸಿದೆ, ಈಗ ಮತ್ತೆ ಜನ ಆತಂಕಕ್ಕೊಳಗಾಗಿದ್ದು, ಭಯದ ನೆರಳಿಗೆ ಸರಿದಿದ್ದಾರೆ,

ಇನ್ನು ಭಟ್ಕಳ ತಾಲೂಕವನ್ನ ನಿರ್ಬಂಧಿತ ವಲಯ ಎಂದು ಗುರುತಿಸಲಾಗಿದೆ, ಈ ಮದ್ಯೆ ಇವತ್ತು 20 ದಿನದ ಬಳಿಕ ಈ ಯುವತಿಯಲ್ಲಿ ಹೇಗೆ ಸೋಂಕು ಕಾಣಿಸಿಕೊಂಡಿದೆ ಎನ್ನುವ ಬಗ್ಗೆ ಜಿಲ್ಲೆಯ ಜನರಲ್ಲಿ ಕುತೂಹಲದ ಜತೆ ಹತ್ತಾರು ಪ್ರಶ್ನೆಗೆ ಕಾರಣವಾಯಿತು. ಕೊನೆಯಲ್ಲಿ ಜಿಲ್ಲಾಡಳಿತದ ಮಾಹಿತಿಯಂತೆ ಸೋಂಕಿತ ಯುವತಿ ತನ್ನ ಸಂಬಂಧಿಕರ ಜತೆಯಲ್ಲಿ ಮಂಗಳೂರಿನ ನ್ಯೂರಾ ಆಸ್ಪತ್ರೆಗೆ ತೆರಳಿದ್ದು, ಅಲ್ಲಿನ ಸಂಪರ್ಕದಿಂದ ಯುವತಿಗೆ ಸೋಂಕು ಕಾಣಿಸಿಕೊಂಡಿದೆ ಎನ್ನುವುದು ಖಚಿತವಾಗಿದೆ. ಇನ್ನು ಇವರ ಜೊತೆ ತೆರಳಿದ್ದ ಸಂಬಂಧಿಕರಿಗೆ ಯಾವುದೇ ರೋಗ ಲಕ್ಷಣ ಕಾಣಿಸಿಕೊಂಡಿಲ್ಲ. ಆದರೆ, ಇವರ ರಕ್ತ ಮತ್ತು ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿಲಾಗಿದೆ.

ಒಟ್ಟಾರೆ ಮುಕ್ತವಾಗಿ ಜಿಲ್ಲೆಯಲ್ಲಿ ನಿಧಾನವಾಗಿ ಎಲ್ಲ ಕಾರ್ಯ ಚಟುವಟಿಕೆಗಳು ಆರಂಭವಾಗುತ್ತಿದ್ದಂತೆ ಮತ್ತೆ ಭಟ್ಕಳದಲ್ಲಿ ಸೋಂಕು ಕಾಣಿಸಿಕೊಂಡಿದ್ದು ಜನರ ನೆಮ್ಮದಿಯ ಕನಸು ಕಮರುವಂತಾಗಿದೆ.

Comments are closed.