ಕರಾವಳಿ

ಕುಂದಾಪುರ ಮಾಜಿ ಶಾಸಕಿ ವಿನ್ನಿಫ್ರೆಡ್‌ ಫೆರ್ನಾಂಡಿಸ್‌ ಇನ್ನಿಲ್ಲ

Pinterest LinkedIn Tumblr

ಕುಂದಾಪುರ : ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕಿ ಹಾಗೂ ಮಾಜಿ ಶಾಸಕಿ ವಿನ್ನಿಫ್ರೆಡ್‌ ಫೆರ್ನಾಂಡಿಸ್‌ (91) ಅಲ್ಪಕಾಲದ ಅಸೌಖ್ಯದಿಂದಾಗಿ ಇಲ್ಲಿನ ಚರ್ಚ್‌ ರಸ್ತೆಯ ತಮ್ಮ ನಿವಾಸದಲ್ಲಿ ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ಮಂಗಳೂರಿನಲ್ಲಿ ಹುಟ್ಟಿದ್ದ ಅವರು ಉದ್ಯಮಿ ಲೂಯಿಸ್‌ ಎಂ ಫೆರ್ನಾಂಡಿಸ್‌ ಅವರನ್ನು ವಿವಾಹವಾದ ಬಳಿಕ ಕುಂದಾಪುರದಲ್ಲಿ ನೆಲೆಸಿದ್ದರು. ಪ್ರಜಾ ಸೋಷಲಿಸ್ಟ್‌ ಪಕ್ಷದ (ಪಿಎಸ್‌ಪಿ) ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದ ಅವರು ಕುಂದಾಪುರ ಪಟ್ಟಣ ಪಂಚಾಯಿತಿ ಇದ್ದ ಕಾಲದಲ್ಲಿಯೇ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದರು. ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಯ ಸದಸ್ಯೆಯಾಗಿ ಸುಮಾರು 33 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು 17 ವರ್ಷಗಳ ಕಾಲ ಪುರಸಭೆಯ ಅಧ್ಯಕ್ಷೆಯಾಗಿದ್ದರು.

1967 ರಿಂದ 1972 ರ ವರೆಗೆ ಪಿಎಸ್‌ಪಿ ಪಕ್ಷದಿಂದ ಹಾಗೂ 1972 ರಿಂದ 1977 ರವರೆಗೆ ಕಾಂಗ್ರೆಸ್‌ ಪಕ್ಷದಿಂದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಅವರು, 2001 ರಿಂದ 2007 ರವರೆಗೆ ಕಾಂಗ್ರೆಸ್‌ ಪಕ್ಷದ ವಿಧಾನ ಪರಿಷತ್‌ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ಕೇಂದ್ರದ ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯ ದೂರವಾಣಿ ನಿಗಮದ ನಿರ್ದೇಶಕಿಯಾಗಿಯೂ ಸೇವೆ ಸಲ್ಲಿಸಿದ್ದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕ್ರೈಸ್ತ ಸಮುದಾಯದ ಹಿರಿಯ ಮುಖಂಡರಾಗಿದ್ದ ಅವರು ಕುಂದಾಪುರದ ಹೋಲಿ ರೋಜರಿ ಇಗರ್ಜಿಯ ಆಡಳಿತ ಮಂಡಳಿಯ ಪದಾಧಿಕಾರಿಯಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕುಂದಾಪುರಕ್ಕೆ ಮಹಿಳಾ ಪೊಲೀಸ್‌ ಠಾಣೆ ತರುವಲ್ಲಿ ಸಾಕಷ್ಟು ಮುತುವರ್ಜಿ ವಹಿಸಿದ್ದ ಅವರು ಈ ಠಾಣೆ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರವಾದ ಬಗ್ಗೆ ಪ್ರಬಲ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

ಮೃತರಿಗೆ ಮೂರು ಗಂಡು ಹಾಗೂ ಮೂರು ಹೆಣ್ಣು ಮಕ್ಕಳಿದ್ದಾರೆ. ಗುರುವಾರ ಬೆಳಿಗ್ಗೆ 10 ಗಂಟೆಗೆ ಕುಂದಾಪುರದ ಹೋಲಿ ರೋಜರಿ ಇಗರ್ಜಿಯಲ್ಲಿ ಅಂತ್ಯವಿಧಿ ನಡೆಯಲಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.

Comments are closed.