ಕರಾವಳಿ

ಯಾವುದೇ ಧಾರ್ಮಿಕ ಆಚರಣೆಯನ್ನು ಮನೆಯಲ್ಲಿಯೇ ಆಚರಿಸಿ: ಡಿಸಿ ಜಿ. ಜಗದೀಶ್

Pinterest LinkedIn Tumblr

ಉಡುಪಿ: ಲಾಕ್‌ಡೌನ್‌ ಇರುವಂತಹ ಸಮಯದಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಧಾರ್ಮಿಕ ಆಚರಣೆಗಳನ್ನು ನಡೆಸಬಾರದು. ಅಗತ್ಯ ವಸ್ತುಗಳ ಖರೀದಿಗೆ ನಿಗದಿ ಪಡಿಸಿದ ಅಂದರೆ 7ರಿಂದ 11 ಗಂಟೆಯ ವರೆಗೆ ಮಾತ್ರ ಹೊರಗಡೆ ಬರಬೇಕು ಎಂಬ ನಿಯಮ ಆಚರಣೆಗಳಿಗೂ ಅನ್ವಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸರ್ವಧರ್ಮೀಯರ ಸಭೆಯಲ್ಲಿ ಅವರು ಮಾತನಾಡಿದರು.

ಹಬ್ಬಗಳನ್ನು ಮನೆಗಳಲ್ಲೇ ಆಚರಿಸಬಹುದು. ಈ ಸಂದರ್ಭ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತೀ ಅಗತ್ಯ. ಕ್ರೈಸ್ತರ ಗುಡ್‌ಫ್ರೈಡೇ ಹಾಗೂ ಮುಸಲ್ಮಾನರ ಷಬ್‌-ಎ-ಬರಾತ್‌ ದಿನಗಳನ್ನು ಧಾರ್ಮಿಕ ಕೇಂದ್ರಗಳಲ್ಲಿ ಜನರನ್ನು ಒಗ್ಗೂಡಿಸಿ ಆಚರಣೆ ಮಾಡಬಾರದು. ಸರ್ವಧರ್ಮದವರು ಇದನ್ನು ಪಾಲಿಸುತ್ತಿದ್ದು, ಲಾಕ್‌ಡೌನ್‌ ನಿಯಮ ಮಗಿಯುವವರೆಗೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಮುಸ್ಲಿಂ ಮುಖಂಡರೋರ್ವರು ಮಾತನಾಡಿ, ಸಮುದಾಯದ ಜನರನ್ನು ವಿನಾಕಾರಣ ಅವಹೇಳನ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿಯಬಿಡಲಾಗುತ್ತಿದೆ. ಇದಕ್ಕೆ ಕಡಿವಾಣ ಅತ್ಯಗತ್ಯ ಎಂದರು.

ಸುಳ್ಳು ಸುದ್ದಿ ವಿರುದ್ಧ ಕ್ರಮ: ಎಸ್ಪಿ
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಸೈಬರ್‌ ಅಪರಾಧ ಠಾಣೆಯ ಮೂಲಕ ಇಂತಹ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್‌ಪಿ ಹೇಳಿದ್ದಾರೆ.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರಚಂದ್ರ, ಸರ್ವ ಧರ್ಮಗಳ ಮುಖಂಡರು, ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.