ಮಂಗಳೂರು ಮಾರ್ಚ್ 12 ; ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು ಮತ್ತು ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಡೇ-ನಲ್ಮ್ ಯೋಜನೆ ಯಡಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಮಂಗಳೂರು ಹೆಣ್ಣು ಇಂದು ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು,ತನ್ನಲ್ಲಿರುವ ಪ್ತತಿಭೆಯನ್ನು ಪ್ರದರ್ಶಿಸಿ ವಿಶ್ವಮಟ್ಟದಲ್ಲಿ ಗೌರವ ಪಾತ್ರವಾಗುತ್ತಿದ್ದಾಳೆ ಎಂದು ಮಹಾನಗರಪಾಲಿಕೆಯ ಉಪ ಮೇಯರ್ ವೇದಾವತಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮನಪಾ ಸದಸೈ ಶಕೀಲ ಕಾವಾ, ಇಡೀ ಪ್ರಪಂಚದಲ್ಲೇ ಮಹಿಳೆಯರಿಗೆ ಗೌರವ ಸ್ಥಾನ ನೀಡುವುದು ನಮ್ಮ ಭಾರತ ಮಾತ್ರ. ಮಹಿಳೆಯರು ಈ ದೇಶದ ಆಸ್ತಿ. ನಾವೆಲ್ಲರೂ ನಮ್ಮೊಳಗಿನ ಅಂತಃಶಕ್ತಿಯನ್ನು ಗುರುತಿಸಿಕೊಂಡು, ನಮ್ಮನ್ನು ನಾವು ಬಲಿಷ್ಠಗೊಳಿಸಿಕೊಂಡು ಪ್ರತಿಯೊಬ್ಬರಿಗೂ ಮಾದರಿಯಾಗಿ ಹೊರಹೊಮ್ಮಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮಂಜುಳ ಸನೀಲ್ ಲಿಂಗ ತಾರತಮ್ಯ ಮತ್ತು ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ಅನ್ನೋದರ ಕುರಿತು ಮಾಹಿತಿಗಳನ್ನು ನೀಡಿದರು. ಸ್ವ-ಸಹಾಯ ಗುಂಪುವಿನ ಉತ್ತೇಜನದಿಂದಾಗಿ ಯಶಸ್ಸಿನ ಮಹಿಳೆಯಾಗಿ ಹೊರ ಹೊಮ್ಮಿದ ಡಾ. ಸಂಶಾದ್ ಮತ್ತು ಕ್ರೀಡಾ ಪಟು ನಿರ್ಮಲ ಯಯ್ಯಾಡಿ ಅವರನ್ನು ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹೆಣ್ಣು ಮಗುವನ್ನು ರಕ್ಷಿಸಿ, ಹೆಣ್ಣು ಮಗುವನ್ನು ಓದಿಸಿ ಕುರಿತಾದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತ ಅಜಿತ್ ಕುಮಾರ್ ಶಾನಾಡಿ, ಮತ್ತು ಉಪ ಆಯುಕ್ತರಾದ ಡಾ. ಸಂತೋಷ ಕುಮಾರ್ ಉಪಸ್ಥಿತರಿದ್ದರು.

Comments are closed.