ಉಡುಪಿ: 2010 ಜನವರಿ 26 ರಂದು ಶಿರ್ವ ಗ್ರಾಮದ ಪಂಜಿಮಾರ್ ಕೋಡುಗುಡ್ಡೆ ಎಂಬಲ್ಲಿರುವ ಸಿರಿಲ್ ನಜರತ್ ಇವರ ವಾಸ್ತವ್ಯದ ಮನೆಯಲ್ಲಿ ಕಳ್ಳತನ ಮಾಡಿದ ಇಬ್ಬರು ಆರೋಪಿಗಳ ವಿರುದ್ಧ ಹೊರಿಸಲಾದ ಆರೋಪಣೆಗಳು ಸಾಭೀತಾಗಿದ್ದು ಇಬ್ಬರಿಗೂ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಮುತ್ತಪ್ಪ @ ಸುರೇಶ್, ಇಕ್ಬಾಬ್ ಅಹಮ್ಮದ್ ಅನ್ಸಾರಿ ಮತ್ತು ಸುದರ್ಶನ್ ಪ್ರಕರಣದ ಆರೋಪಿಗಳು.

ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಹಿಂಬದಿಯ ಕಿಟಕಿಯ ಮೂಲಕ ಟೆರೇಸ್ ಮೇಲೆ ಪ್ರವೇಶಿಸಿ ಅಲ್ಲಿನ ಮರದ ಬಾಗಿಲನ್ನು ಮುರಿದು ಮನೆಯ ಒಳಗೆ ಪ್ರವೇಶಿಸಿ, ಕಬ್ಬಿಣದ ಕಪಾಟಿನ ಬಾಗಿಲನ್ನು ತೆರೆದು ಅದರೊಳಗಿದ್ದ ಚಿನ್ನಾಭರಣಗಳು, ವಾಚ್, ನಗದು ಹಣ ಮತ್ತು ಬಹರಿನ್ ದೇಶದ ದಿನಾರುಗಳನ್ನು ಕಳವು ಮಾಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕಾಪು ವೃತ್ತ ನಿರೀಕ್ಷಕ ಚೆಲುವ ರಾಜು.ಬಿ ತನಿಖೆ ನಡೆಸಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಈ ಪ್ರಕರಣವು ಉಡುಪಿ 3ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿತನ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಮಹಂತೇಶ್ ಭೂಸಗೋಳರವರು 1ನೇ ಆರೋಪಿ ಮುತ್ತಪ್ಪ @ ಸುರೇಶ್‍ರವರಿಗೆ 3,500 ರೂ. ದಂಡ ಮತ್ತು 2 ವರ್ಷ 6 ತಿಂಗಳು ಶಿಕ್ಷೆ, 2ನೇ ಆರೋಪಿ ಇಕ್ಬಾಲ್ ಅಹಮ್ಮದ್ ಅನ್ಸಾರಿಗೆ 3,500 ರೂ. ದಂಡ ಮತ್ತು 2 ವರ್ಷ 6 ತಿಂಗಳು ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ.ಕೆ. ವಾದ ಮಂಡಿಸಿದ್ದಾರೆ.
Comments are closed.