ಕರಾವಳಿ

ಕಾರವಾರ: ಶಾಲಾಭಿವೃದ್ಧಿ ಸಮಿತಿಯ ಸದಸ್ಯನಿಂದ ಅತ್ಯಾಚಾರಕ್ಕೆ ಯತ್ನ

Pinterest LinkedIn Tumblr


ಕಾರವಾರ: ಶಾಲಾಭಿವೃದ್ಧಿ ಸಮಿತಿಯ ಸದಸ್ಯನೊಬ್ಬ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆಯ ಜಿಲ್ಲೆಯಲ್ಲಿ ನಡೆದಿದೆ.

ಶಾಲಾಭಿವೃದ್ಧಿ ಸದಸ್ಯ ನಾರಾಯಣ ಬಾಳು ನೆಸರಕರ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಜನವರಿ 19 ರಂದು ವಿದ್ಯಾರ್ಥಿನಿಯ ತಂದೆ-ತಾಯಿ ಹೊಲದ ಕೆಲಸಕ್ಕೆ ಹೋಗಿದ್ದರು. ಈ ವೇಳೆ ನಾರಾಯಣ ಮನೆಗೆ ಆಗಮಿಸಿ ಮನೆಯಲ್ಲಿದ್ದ ವಿದ್ಯಾರ್ಥಿನಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ತಕ್ಷಣ ವಿದ್ಯಾರ್ಥಿನಿ ಕೂಗಿಕೊಂಡಿದ್ದಾಳೆ. ಇದರಿಂದ ಭಯಬೀತನಾದ ನಾರಾಯಣ ವಿದ್ಯಾರ್ಥಿನಿಯ ಬಾಯಿಯನ್ನು ಹಿಡಿದುಕೊಂಡು ತನ್ನ ಮೊಬೈಲ್‍ದಿಂದ ಫೋಟೋ ತೆಗೆದುಕೊಂಡಿದ್ದಾನೆ.

ನೀನು ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಈ ಫೋಟೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ನಂತರ ಶಾಲೆಯ ಶಿಕ್ಷಕರೊಬ್ಬರಿಗೆ ಫೋನ್ ಮಾಡಿ ನಿಮ್ಮ ಶಾಲೆಯ ವಿದ್ಯಾರ್ಥಿನಿಯೊಬ್ಬಳ ಬಗ್ಗೆ ಏನೋ ಹೇಳುವುದಿದೆ ಎನ್ನುತ್ತ ಫೋನ್ ಕಟ್ ಮಾಡಿದ್ದಾನೆ. ಅಲ್ಲದೇ ಜ.21ರಂದು ನಾರಾಯಣ ಮತ್ತೆ ಶಾಲೆಯ ಬಳಿ ಹೋಗಿ ಶಿಕ್ಷಕರ ಹತ್ತಿರ ಏನೋ ಮಾತನಾಡಿ ಹೋಗಿದ್ದಾನೆ ಎಂದು ಹೇಳಲಾಗಿದೆ.

ಇದನ್ನೆಲ್ಲ ಗಮನಿಸಿದ ವಿದ್ಯಾರ್ಥಿನಿ ಗಾಬರಿಗೊಂಡು ಮನೆಗೆ ಹೋಗಿ, ಸುಮ್ಮನೆ ಕುಳಿತ್ತಿದ್ದಳು. ಎರಡ್ಮೂರು ದಿನಗಳಿಂದ ಮಗಳ ನಡವಳಿಕೆಯಲ್ಲಾದ ಬದಲಾವಣೆಯನ್ನು ಗಮನಿಸಿದ ತಾಯಿ ಮಗಳನ್ನು ಸೂಕ್ಷ್ಮವಾಗಿ ವಿಚಾರಿಸಿದಾಗ ನಡೆದ ಘಟನೆಯ ಕುರಿತು ಹೇಳಿಕೊಂಡಿದ್ದಾಳೆ. ನಂತರ ವಿದ್ಯಾರ್ಥಿನಿಯ ತಾಯಿ ಮುಂಡಗೋಡ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.

ಇತ್ತ ನಡೆದ ಘಟನೆ ಬಹಿರಂಗವಾಗುತ್ತಿದ್ದಂತೆ ಆರೋಪಿತ ನಾರಾಯಣ ಬಾಳು ನೆಸರಕರ ಎರಡು ದಿನಗಳಿಂದಲೇ ನಾಪತ್ತೆಯಾಗಿದ್ದಾನೆ. ಸದ್ಯಕ್ಕೆ ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ.

Comments are closed.