ಕರಾವಳಿ

ಶಿರ್ವ ಧರ್ಮಗುರು ಆತ್ಮಹತ್ಯೆ ಪ್ರಕರಣ-ಜಾಲತಾಣದಲ್ಲಿ ಅವಹೇಳನ:1 ಕೋಟಿ ರೂ.ಮಾನನಷ್ಟ

Pinterest LinkedIn Tumblr

 

ಉಡುಪಿ: ಶಿರ್ವ ಚರ್ಚಿನ ಸಹಾಯಕ ಧರ್ಮಗುರು, ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾಮಹೇಶ್‌ ಡಿಸೋಜಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜಾ ಅವರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹರಿಬಿಟ್ಟ ಬಗ್ಗೆ ಮೂರನೇ ಹೆಚ್ಚುವರಿ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಕುತ್ಯಾರ್ ಜೋಯಲ್ ಮಥಾಯಾಸ್, ಪಿಲಾರ್ ಫ್ಲೇವಿಯಾ ಮಥಿಯಾಸ್, ಲೀನಾ ಮಥಾಯಾಸ್ ಅವರ ಮೇಲೆ ಒಂದು ಕೋಟಿ ರೂಪಾಯಿಯ ಮಾನಹಾನಿ ದಾವೆ ದಾಖಲಾಗಿದ್ದು ನ್ಯಾಯಾಲಯ ಈ ಮೂವರಿಗೆ ನೋಟಿಸ್‌ ನೀಡಿದೆ.

ಈ ಹಿಂದೆ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ. ಮಹೇಶ್‌ ಡಿಸೋಜಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನ್ನ ವಿರುದ್ಧ ಸುಳ್ಳು ಸಂದೇಶವನ್ನು ಈ ಮೂವರು ಆರೋಪಿಗಳು ಹರಡುತ್ತಿದ್ದಾರೆ ಎಂದು ಡೇವಿಡ್ ಡಿಸೋಜಾ ದೂರಿನಲ್ಲಿ ಆರೋಪಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಉಡುಪಿ ಅವರು ಕುತ್ಯಾರ್ ನಿವಾಸಿ ಜೊಯೇಲ್ ಮಥಿಯಾಸ್ ಮತ್ತು ಪಿಲಾರ್ ನಿವಾಸಿ ಫ್ಲೇವಿಯಾ ಮಥಿಯಾಸ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಶಿರ್ವ ಪೊಲೀಸರಿಗೆ ಆದೇಶ ನೀಡಿತ್ತು.

ಆರೋಪಿಗಳು ಈ ಮೊದಲು ನನ್ನ ವಿರುದ್ದ ಸುಳ್ಳು ಸುದ್ದಿ ಹರಿಯಬಿಟ್ಟಿದ್ದು, ಬಳಿಕ ಪೊಲೀಸ್‌ ಠಾಣೆಯಲ್ಲಿ ಈ ಕ್ಷಮೆ ಯಾಚಿಸಿದ್ದರು. ಇದಾದ ನಂತರ ಮಹೇಶ್‌ ಡಿಸೋಜಾ ಅವರ ಪ್ರಕರಣದ ದುರ್ಬಳಕೆ ಮಾಡಿಕೊಂಡು ಮತ್ತೊಮ್ಮೆ ನನ್ನ ವಿರುದ್ದ ವದಂತಿಗಳನ್ನು ಹಬ್ಬುತ್ತಿದ್ದಾರೆ ಎಂದು ಡೇವಿಡ್ ಡಿಸೋಜಾ ದೂರಿನಲ್ಲಿ ಆರೋಪಿಸಿದ್ದರು .

Comments are closed.